ಮುಂಬೈ, ಜ. 19 (DaijiworldNews/TA): ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸೋಲಿನೊಂದಿಗೆ ಟೀಮ್ ಇಂಡಿಯಾ ಅಂತ್ಯಗೊಳಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೂ, ಉಳಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ಕಿವೀಸ್ ತಂಡ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಇದಾದ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ. ಆದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿರುವ ಕಾರಣ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಕಿಂಗ್ ಕೊಹ್ಲಿ ಚುಟುಕು ವಿಶ್ವಕಪ್ನಲ್ಲೂ ಭಾಗವಹಿಸುವುದಿಲ್ಲ.
ಟಿ20 ವಿಶ್ವಕಪ್ ನಂತರ ಭಾರತೀಯ ಆಟಗಾರರು ಐಪಿಎಲ್ನಲ್ಲಿ ನಿರತರಾಗಲಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗುವವರೆಗೆ ಟೀಮ್ ಇಂಡಿಯಾ ಯಾವುದೇ ಏಕದಿನ ಸರಣಿಯನ್ನು ಆಡಲಿಲ್ಲ. ಇದರ ಪರಿಣಾಮವಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮುಂದಿನ ಕೆಲ ತಿಂಗಳುಗಳು ನೋಡಲು ಸಾಧ್ಯವಿಲ್ಲ. ಅಂದರೆ ಕ್ರಿಕೆಟ್ ಅಭಿಮಾನಿಗಳು ಈ ಇಬ್ಬರು ದಿಗ್ಗಜರನ್ನು ಮತ್ತೆ ಭಾರತ ಪರ ಆಡುವುದನ್ನು ನೋಡಲು ಜೂನ್ ತಿಂಗಳವರೆಗೆ ಕಾಯಬೇಕಾಗಿದೆ. ಜೂನ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಮರುಪ್ರವೇಶ ಮಾಡಲಿದ್ದಾರೆ. ಅಲ್ಲಿಯವರೆಗೆ ಈ ಇಬ್ಬರು ಅನುಭವಿ ಆಟಗಾರರಿಗೆ ಸಂಪೂರ್ಣ ವಿಶ್ರಾಂತಿ ದೊರೆಯಲಿದೆ.