ಇಂದೋರ್, ಜ. 18 (DaijiworldNews/AA): ಇಂದೋರ್ನ ಹೋಳ್ಕರ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 41 ರನ್ಗಳಿಂದ ಸೋಲಿಸಿದ ನ್ಯೂಜಿಲೆಂಡ್ ತಂಡ 2-1 ಅಂತರದಿಂದ ಏಕದಿನ ಸರಣಿಯನ್ನು ಗೆದ್ದಿದೆ.

ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಭಾರತದ ನೆಲದಲ್ಲಿ ನ್ಯೂಜಿಲೆಂಡ್ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 337 ರನ್ ಕಲೆಹಾಕಿತು. 338 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ ಸೋಲನ್ನು ಕಂಡಿತು.
ಪ್ರಮುಖ ವಿಕೆಟ್ ಕಳೆದುಕೊಂಡರೂ, ತಂಡದ ಪರ ಸಂಯಮದಿಂದ ಬ್ಯಾಟ್ ಬೀಸಿದ ಕೊಹ್ಲಿ 93 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಆದರೆ ಅವರಿಗೆ ಪ್ರಮುಖ ಬ್ಯಾಟ್ಸ್ಮನ್ಗಳು ಸಾಥ್ ನೀಡದ ಹಿನ್ನೆಲೆ ತಂಡ ಸರಣಿ ಸೋಲು ಅನುಭವಿಸಿತು. ಇನ್ನು ಕೊಹ್ಲಿ, ಈ ಶತಕದೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಭಾರತ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ ಸರಣಿಯ ಮೊದಲ ಪಂದ್ಯವನ್ನು ಸೋತಿತ್ತು. ಮೊದಲ ಪಂದ್ಯ ಸೋತ ನಂತರ, ನ್ಯೂಜಿಲೆಂಡ್ ಎರಡನೇ ಪಂದ್ಯವನ್ನು ಗೆದ್ದಿತು. ಇದೀಗ ಸರಣಿಯ ಅಂತಿಮ ಪಂದ್ಯವನ್ನು ಗೆದ್ದುಕೊಂಡಿದೆ.