ನವದೆಹಲಿ, ಡಿ. 12 (DaijiworldNews/AK):ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 150 ಗ್ರಾಂ ಹೆಚ್ಚುವರಿ ತೂಕದಿಂದ ಪದಕ ವಂಚಿತರಾಗಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.

ಇದೀಗ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದು, ಮತ್ತೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. 2028 ರ ಲಾಸ್ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನ ಹಂಚಿಕೊಂಡಿದ್ದಾರೆ.
ಪ್ಯಾರಿಸ್ ಬಳಿಕ ಎಲ್ಲವೂ ಮುಗಿಯಿತೇ ಎಂದು ಜನರು ನನ್ನನ್ನ ಕೇಳುತ್ತಲೇ ಇದ್ದರು. ಈ ಪ್ರಶ್ನೆಗಳಿಗೆ ದೀರ್ಘಕಾಲದ ವರೆಗೆ ನನ್ನ ಬಳಿ ಉತ್ತರವಿರಲಿಲ್ಲ. ಒತ್ತಡ, ನಿರೀಕ್ಷೆ ಮತ್ತು ನನ್ನದೇ ಮಹತ್ವಾಕಾಂಕ್ಷೆಗಳಿಂದ ದೂರ ಸರಿದು ನಾನು ನನ್ನನ್ನೇ ಹುಡುಕಿಕೊಳ್ಳಬೇಕಾಯಿತು. ವರ್ಷದ ನಂತರ ನಾನು ಸುಧಾರಿಸಿಕೊಂಡೆ. ಆ ನಂತರ ಮೌನದ ಮಧ್ಯೆ ನಾನು ಈ ಕ್ರೀಡೆಯನ್ನು ಇನ್ನೂ ಪ್ರೀತಿಸುತ್ತೇನೆ ಎಂದು ನನಗೆ ಸ್ಪಷ್ಟವಾಯಿತು ಎಂದು ಹೇಳಿದ್ದಾರೆ.
ಮತ್ತೆ ಸ್ಪರ್ಧಿಸುವ ನಿರ್ಧಾರದ ಕುರಿತು ಅವರು, ʻಬೆಂಕಿ ಎಂದಿಗೂ ಆರಲಿಲ್ಲ, ಅದು ಆಯಾಸದ ಅಡಿಯಲ್ಲಿ ಹೂತುಹೋಗಿತ್ತು. ಈಗ ಭಯವಿಲ್ಲದ ಹೃದಯದೊಂದಿಗೆ, ಬಗ್ಗದ ಮನೋಭಾವದೊಂದಿಗೆ ಲಾಸ್ ಏಂಜಲ್ಸ್ LA28 ಕಡೆ ಹೆಜ್ಜೆ ಹಾಕುತ್ತಿದ್ದೇನೆʼ ಎಂದು ಹೇಳಿದ್ದಾರೆ.
2025ರ ಜುಲೈನಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಅವರು, ಈ ಪ್ರಯಾಣದಲ್ಲಿ ನಾನು ಒಬ್ಬಂಟಿಯಾಗಿಲ್ಲ. ನನ್ನ ಮಗು ನನ್ನೊಂದಿಗೆ ಇದೆ. ಲಾಸ್ ಏಂಜಲ್ಸ್ ಒಲಿಂಪಿಕ್ಸ್ ಕಡೆಗೆ ಸಾಗುವ ಹಾದಿಯಲ್ಲಿ ಅವನೇ ನನ್ನ ಚಿಕ್ಕ ಚಿಯರ್ ಲೀಡರ್ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.