ಅಬುಧಾಬಿ, ಡಿ. 11 (DaijiworldNews/TA): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್–19ರ ಮಿನಿ ಹರಾಜಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಡಿಸೆಂಬರ್ 16 ರಂದು ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಒಟ್ಟು 359 ಆಟಗಾರರು ಭಾಗವಹಿಸಲಿದ್ದಾರೆಂದು ಬಿಸಿಸಿಐ ಪ್ರಕಟಿಸಿದೆ. ಆದರೆ ಎಲ್ಲರ ಗಮನ ಸೆಳೆದಿರುವ ದೊಡ್ಡ ವಿಚಾರವೆಂದರೆ ಇಂಗ್ಲೆಂಡ್ ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಳ್ಳದೇ ಇರುವುದು.

ಐಪಿಎಲ್ 2026 ಮಿನಿ ಹರಾಜಿಗೆ 359 ಮಂದಿಯ ಪ್ರಾಥಮಿಕ ಪಟ್ಟಿ ಸಿದ್ದವಾಗಿದ್ದರೂ, ಇಂಗ್ಲೆಂಡ್ನ ಸ್ಫೋಟಕ ದಾಂಡಿಗ ಹ್ಯಾರಿ ಬ್ರೂಕ್ ಹೆಸರು ಸೇರಿಸಲ್ಪಟ್ಟಿಲ್ಲ. ಇದಕ್ಕೆ ಪ್ರಮುಖ ಕಾರಣ ಅವರ ಮೇಲೆ ಹೇರಲಾದ 2 ವರ್ಷಗಳ ಐಪಿಎಲ್ ನಿಷೇಧ. ಬ್ರೂಕ್ ಅವರು ಐಪಿಎಲ್ 2025 ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರೂ.6.25 ಕೋಟಿಗೆ ಖರೀದಿಯಾಗಿದ್ದರು. ಆದರೆ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ, ಅಂತರರಾಷ್ಟ್ರೀಯ ಕ್ರಿಕೆಟ್ಗೆ ಹೆಚ್ಚಿನ ಗಮನ ಕೊಡಬೇಕೆಂದು ಹೇಳಿ ಅವರು ಐಪಿಎಲ್ನಿಂದ ಹಿಂದೆ ಸರಿದರು.
ಬಿಸಿಸಿಐ ಹೊಸ ನಿಯಮದ ಅನ್ವಯ, ಹರಾಜಿನಲ್ಲಿ ಆಯ್ಕೆಯಾದ ಆಟಗಾರರು ಯಾವುದೇ ಸಮರ್ಪಕ ಕಾರಣವಿಲ್ಲದೆ ಟೂರ್ನಿಯಿಂದ ಹಿಂದೆ ಸರಿದರೆ ಅವರಿಗೆ 2 ವರ್ಷಗಳ ನಿಷೇಧ ಅನಿವಾರ್ಯ. ಈ ನಿಯಮವು ವಿದೇಶಿ ಆಟಗಾರರು ಐಪಿಎಲ್ ಆರಂಭದ ಮುನ್ನ ಹಿಂತೆಗೆದುಕೊಳ್ಳುವ ಪ್ರವೃತ್ತಿ ತಡೆಯುವ ಉದ್ದೇಶ ಹೊಂದಿದೆ. ಇದರಂತೆ, ಬ್ರೂಕ್ ಅವರ ವಿರುದ್ಧ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಶಿಸ್ತು ಕ್ರಮ ತೆಗೆದುಕೊಂಡಿದ್ದು, 2026 ಮತ್ತು 2027ರ ಹರಾಜುಗಳಲ್ಲಿ ಅವರನ್ನು ಪರಿಗಣಿಸಲಾಗುವುದಿಲ್ಲ.
ನಿಷೇಧದ ಅವಧಿ ಕಾರಣದಿಂದ, ಹ್ಯಾರಿ ಬ್ರೂಕ್ ಐಪಿಎಲ್ಗೆ ಮರಳಬೇಕೆಂದರೆ 2028ರ ಸೀಸನ್ ವರೆಗೂ ಕಾಯಬೇಕಾಗುತ್ತದೆ. ಇಂಗ್ಲೆಂಡ್ ತಂಡದ ಪ್ರಮುಖ ಟಿ20 ಆಟಗಾರನಾದ ಬ್ರೂಕ್ ಗೈರು-ಅಬುಧಾಬಿಯಲ್ಲಿ ನಡೆಯಲಿರುವ ಮಿನಿ ಹರಾಜಿನ ಪ್ರಮುಖ ಚರ್ಚಾ ವಿಷಯವಾಗಿದೆ.