ಗಬ್ಬಾ, ಡಿ. 06 (DaijiworldNews/TA): ಬ್ರಿಸ್ಬೇನ್ನ ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆ್ಯಶಸ್ ಎರಡನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ದಾಖಲೆಗೆ ಹೆಸರಾಗಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಒಂದೇ ದಿನದಾಟದಲ್ಲಿ ಅತೀ ಹೆಚ್ಚು ರನ್ಗಳನ್ನು ಕಲೆಹಾಕಿದ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾ ತಂಡವು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 334 ರನ್ಗಳನ್ನು ಕಲೆಹಾಕಿತು. ಪ್ರತ್ಯುತ್ತರವಾಗಿ ಬ್ಯಾಟ್ಗೆ ಬಂದ ಆಸ್ಟ್ರೇಲಿಯಾ ಪರ ಜಾಕ್ ವೆದರಾಲ್ಡ್ (72), ಮಾರ್ನಸ್ ಲಾಬುಶೇನ್ (65), ಸ್ಟೀವ್ ಸ್ಮಿತ್ (61) ಹಾಗೂ ಅಲೆಕ್ಸ್ ಕ್ಯಾರಿ (63) ತಲಾ ಅರ್ಧಶತಕ ಬಾರಿಸಿ ತಂಡವನ್ನು ಭದ್ರಗೊಳಿಸಿದರು.
ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 378 ರನ್ಗಳನ್ನು ಗಳಿಸಿತು. ಇದರೊಂದಿಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಒಂದೇ ದಿನದಾಟದಲ್ಲಿ ಅತೀ ಹೆಚ್ಚು (378) ರನ್ಗಳಿಸುವ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ. 2017ರಲ್ಲಿ ಎಡ್ಜ್ಬಾಸ್ಟನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಿಂಕ್ ಬಾಲ್ ಟೆಸ್ಟ್ನ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ 348 ರನ್ ಕಲೆಹಾಕಿ ಈ ದಾಖಲೆಯನ್ನು ಹೊಂದಿತ್ತು. ಆದರೆ ಗಬ್ಬಾದಲ್ಲಿ ಅದೇ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ದಾಖಲೆಯನ್ನು ಭಂಗಪಡಿಸಿದೆ.