ಮುಂಬೈ, ಡಿ. 05 (DaijiworldNews/AK): ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಮದುವೆ ಮುಂದೂಡಿದ ಬಳಿಕ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ತಂದೆಯ ಅನಾರೋಗ್ಯದ ಕಾರಣದಿಂದಾಗಿ ಅವರ ಮದುವೆ ತಾತ್ಕಾಲಿಕವಾಗಿ ರದ್ದಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದ್ದೇ ಕಥೆ ಹೇಳಲಾಗುತ್ತಿದೆ. ಆದಾಗ್ಯೂ ಆ ವದಂತಿಗಳಿಗೆ ಎರಡು ಕಡೆಯಿಂದಲೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಹೀಗಾಗಿ ಕೆಲವರು ವಿವಿಧ ರೀತಿಯ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ.
ಇದರ ನಡುವೆ 12 ದಿನಗಳ ನಂತರ ಸ್ಮೃತಿ ಮಂಧಾನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಮಂಧಾನ ತಮ್ಮ ಮದುವೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಈ ವೀಡಿಯೊದಲ್ಲಿ, ಅವರು ವಿಶ್ವಕಪ್ ಫೈನಲ್ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಸ್ಮೃತಿ ಮಂಧಾನ ಡಿಸೆಂಬರ್ 5 ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಲ್ಲ. ಬದಲಿಗೆ ಇದು ಬ್ರ್ಯಾಂಡ್ ಅನುಮೋದನೆಗಳಿಗಾಗಿ ಪ್ರಾಯೋಜಿತ ವೀಡಿಯೊವಾಗಿದೆ. ಅದರಲ್ಲಿ, ಅವರು 2025 ರ ವಿಶ್ವಕಪ್ ಗೆದ್ದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿಕೊಂಡಿರುವ ಮಂಧಾನ, ‘ತಂಡದ ಅಗತ್ಯಗಳಿಗೆ ಅನುಗುಣವಾಗಿ ಆಡುತ್ತಿದ್ದರಿಂದ ಬ್ಯಾಟಿಂಗ್ ಮಾಡುವಾಗ ಹೆಚ್ಚು ಯೋಚಿಸುತ್ತಿರಲಿಲ್ಲ. ಆದರೆ, ಫೀಲ್ಡಿಂಗ್ ಮಾಡುವಾಗ, ನಾನು ಎಲ್ಲಾ ದೇವರುಗಳನ್ನು ನೆನಪಿಸಿಕೊಳ್ಳುತ್ತಿದೆ. ಪ್ರತಿ ಎಸೆಗಳಲ್ಲೂ ವಿಕೆಟ್ ಬೀಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ ಎಂದಿದ್ದಾರೆ.
ಸ್ಮೃತಿ ಮತ್ತು ಪಲಾಶ್ ಮುಚ್ಚಲ್ ಕಳೆದ ತಿಂಗಳು ನವೆಂಬರ್ 23 ರಂದು ವಿವಾಹವಾಗಬೇಕಿತ್ತು. ಸಾಂಗ್ಲಿಯಲ್ಲಿರುವ ಮಂಧಾನ ಅವರ ಮನೆಯಲ್ಲಿ ವಿವಾಹ ನಡೆಯಬೇಕಿತ್ತು, ಆದರೆ ಆ ದಿನ ಇದ್ದಕ್ಕಿದ್ದಂತೆ ಮದುವೆಯನ್ನು ಮುಂದೂಡಲಾಯಿತು. ಮಂಧಾನ ಕುಟುಂಬ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಮೃತಿ ಅವರ ತಂದೆಯ ಆರೋಗ್ಯ ಹದಗೆಟ್ಟಿದೆ ಎಂದು ಉಲ್ಲೇಖಿಸಲಾಗಿತ್ತು. ನಂತರ ಅವರನ್ನು ಮೂರು ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಪಲಾಶ್ ಮುಚ್ಚಲ್ ಅವರ ಆರೋಗ್ಯ ಹದಗೆಟ್ಟ ಕಾರಣ ಕೆಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ವಿವಾಹದ ಬಗ್ಗೆ ಯಾವುದೇ ಮಾತಿಲ್ಲ.