ಬೆಂಗಳೂರು, ಡಿ. 03 (DaijiworldNews/TA): ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಐದು ಪಂದ್ಯಗಳ ಟಿ20 ಸರಣಿ ಡಿಸೆಂಬರ್ 9ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಕಟಕ್, ಎರಡನೇ ಪಂದ್ಯ ಮುಲ್ಲನ್ಪುರ್, ಬಳಿಕ ಉಳಿದ ಪಂದ್ಯಗಳು ಕ್ರಮವಾಗಿ ಧರ್ಮಶಾಲ, ಲಕ್ನೋ ಮತ್ತು ಅಹಮದಾಬಾದ್ ನಲ್ಲಿ ನಡೆಯಲಿದೆ.

ಈ ಸರಣಿಯ ವಿಶೇಷ ಗಮನದ ಪಾತ್ರ ಎಂದರೆ ಭಾರತ ಟೀಮ್ನ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಏಷ್ಯಾಕಪ್ ಟೂರ್ನಿ ವೇಳೆ ಗಾಯಗೊಂಡ ಪಾಂಡ್ಯ ಆ ಬಳಿಕ ಯಾವುದೇ ಪಂದ್ಯದಲ್ಲಿ ಆಡಲಾಗದೇ ಬಂದಿದ್ದರು. ಈಗ ಸಂಪೂರ್ಣ ಫಿಟ್ನೆಸ್ ಪಡೆದಿರುವ ಪಾಂಡ್ಯ ಬರೋಡ ಪರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ.
ಹೀಗಾಗಿ, ಸೌತ್ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯನ ಆಯ್ಕೆಯು ಖಚಿತವಾಗಿದೆ. ಇದರಿಂದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.
ಇದೇ ಸಮಯದಲ್ಲಿ, ಮೊದಲ ಟೆಸ್ಟ್ ಪಂದ್ಯದಲ್ಲಿ ಕುತ್ತಿಗೆ ನೋವಿಗೆ ಒಳಗಾದ ಟೀಮ್ ಇಂಡಿಯಾ ಟಿ20 ಉಪನಾಯಕ ಶುಭ್ಮನ್ ಗಿಲ್ ಈ ಸರಣಿಯಲ್ಲಿ ಕಾಣಿಸಿಕೊಳ್ಳದಿರುವ ಸಾಧ್ಯತೆಯಾಗಿದೆ.
ಗಿಲ್ ಅಲಭ್ಯವಾದಲ್ಲಿ, ತಂಡಕ್ಕೆ ಯಶಸ್ವಿ ಜೈಸ್ವಾಲ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಏಕೆಂದರೆ, ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಗಿಲ್ ಹೊರಗಿಳಿದ ಕಾರಣ, ಜೈಸ್ವಾಲ್ ಆರಂಭಿಕ ಆಟಗಾರನಾಗಿ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಅವರು ಟಿ20 ಸರಣಿಯಲ್ಲಿಯೂ ಬದಲಿ ಆಟಗಾರರಾಗಿ ಆಯ್ಕೆ ಹೊಂದುವ ಸಾಧ್ಯತೆ ಹೆಚ್ಚಾಗಿದೆ.