ನವದೆಹಲಿ, ಡಿ. 01 (DaijiworldNews/TA): ಟೀಮ್ ಇಂಡಿಯಾ ಒಳಗಾಂಗಣದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹಗಳಿಗೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ. ಭಾರತ–ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮಧ್ಯೆ ಬಿಸಿಸಿಐ ತುರ್ತು ಸಭೆ ಕರೆದಿರುವುದು, ಜೊತೆಗೆ ರಾಂಚಿ ಪಂದ್ಯಾನಂತರ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ನಡೆದ ಗಂಭೀರ ಮಾತಿನ ಚರ್ಚೆಯ ಫೋಟೋ ವೈರಲ್ ಆಗಿರುವುದು ಸಂಚಲನ ಮೂಡಿಸಿದೆ.

ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೂ, ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ರೋಹಿತ್ ಶರ್ಮಾ ಗಂಭೀರವಾಗಿ ವಾದಿಸುತ್ತಿರುವಂತೆ ಕಾಣಿಸಿಕೊಂಡರು. ಗೌತಮ್ ಗಂಭೀರ್ ಸಹ ತೀವ್ರ ಭಾವನೆಯಲ್ಲಿ ನಿಂತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, “ರೋಹಿತ್–ಗಂಭೀರ್ ನಡುವೆ ಏನಿದು ಸಂಘರ್ಷ?” ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಈ ಹಿನ್ನಲೆಯಲ್ಲಿ, ದ್ವಿತೀಯ ಏಕದಿನಕ್ಕೂ ಮುನ್ನ ಬಿಸಿಸಿಐ ತುರ್ತು ಸಭೆ ಕರೆದಿದ್ದು, ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸಭೆಯಲ್ಲಿ ಹಾಜರಾಗಲಿದ್ದಾರೆ. ವರದಿಗಳ ಪ್ರಕಾರ, ಟೀಮ್ ಇಂಡಿಯಾದ ಹಿರಿಯ ಆಟಗಾರರು ಮತ್ತು ಕೋಚಿಂಗ್ ಸ್ಟಾಫ್ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಸಂವಹನದ ಕೊರತೆಯೇ ಈ ಅಂತರಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ತಂಡದೊಳಗೆ ಒಗ್ಗಟ್ಟಿನ ಕೊರತೆ, ನಿರ್ಧಾರಗಳ ಬಗ್ಗೆ ವಿರೋಧಾಭಿಪ್ರಾಯ ಹಾಗೂ ಜವಾಬ್ಧಾರಿಗಳ ಹಂಚಿಕೆ ಕುರಿತ ಅಸಮಾಧಾನ ಹೆಚ್ಚಾಗಿದೆ. ಈ ಕಾರಣದಿಂದಲೇ ಬೋರ್ಡ್ ತುರ್ತು ಮಧ್ಯಪ್ರವೇಶಕ್ಕೆ ಮುಂದಾಗಿದೆ.
ಇದೇ ವೇಳೆ, ಸೀನಿಯರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಭೆಗೆ ಹಾಜರಾಗಲಿರುವಾರಾ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಟೀಂ ಇಂಡಿಯಾದೊಳಗಿನ ಕಲಹಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿರುವುದು ಖಚಿತ. ಒಟ್ಟಾರೆ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗೆ ಇದೀಗ ಬಿಸಿಸಿಐ ತುರ್ತು ಸಭೆಯೇ ಮುದ್ರೆಒತ್ತಿದಂತಿದೆ. ಮಂಗಳವಾರದ ಸಭೆಯಿಂದ ತಂಡದ ಒಳಗಿನ ನಿಜಸ್ಥಿತಿಗೆ ಸ್ಪಷ್ಟನೆ ಸಿಗುವ ನಿರೀಕ್ಷೆಯಿದೆ.