ಬೆಂಗಳೂರು, ನ. 30 (DaijiworldNews/TA): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಹಿರಿಯ ಪತ್ರಿಕೋದ್ಯಮಿ ಕೆ.ಎನ್.ಶಾಂತಕುಮಾರ್ ಅವರಿಗೆ ಹೈಕೋರ್ಟ್ ಅನುಮತಿ ನೀಡಿದೆ. ರೂ.200 ಹಿಂಬಾಕಿ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಕೆಎಸ್ಸಿಎ ಚುನಾವಣಾಧಿಕಾರಿ ತಮ್ಮ ನಾಮಪತ್ರ ತಿರಸ್ಕರಿಸಿದ್ದರ ವಿರುದ್ಧ ಶಾಂತಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅವರಿಗೆ ಹೈಕೋರ್ಟ್ನಲ್ಲಿ ಗೆಲುವು ಸಿಕ್ಕಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಅಣಿಯಾಗಿದ್ದಾರೆ.

ಶಾಂತಕುಮಾರ್ ಅವರು ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ರೀಡಾ ಕ್ಲಬ್ ಪ್ರತಿನಿಧಿಸುತ್ತಿದ್ದಾರೆ. ಆದರೆ ಕಳೆದ 4 ವರ್ಷಗಳ ಕ್ಲಬ್ ಶುಲ್ಕ 200 ರು. ಹಣವನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದರು. ಇದರ ವಿರುದ್ಧ ಶಾಂತಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಗುರುವಾರ ಅರ್ಜಿದಾರರು ಮತ್ತು ಚುನಾವಣಾಧಿಕಾರಿ ಸೇರಿ ಎಲ್ಲರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾ. ಸೂರಜ್ ಗೋವಿಂದರಾಜ್ ಅವರ ಪೀಠ ತೀರ್ಪು ಕಾಯ್ದಿರಿಸಿತ್ತು. ಶನಿವಾರ ತೀರ್ಪು ಪ್ರಕಟಿಸಿದ್ದು, ಈ ಹಿಂದೆ ಸೂಚಿಸಿದಂತೆ ಡಿ.7ರಂದೇ ಚುನಾವಣೆ ನಡೆಸಲು ಕೆಎಸ್ಸಿಎಗೆ ನಿರ್ದೇಶಿಸಿದೆ.
"ಚುನಾವಣೆಗೆ ಸ್ಪರ್ಧೆ ಮಾಡಲು ಹೈಕೋರ್ಟ್ ಹಸಿರು ನಿಶಾನೆ ತೋರಿರುವುದರಿಂದ, ನಾನೀಗ ನಿರಾಳನಾಗಿದ್ದೇನೆ. ಚುನಾವಣೆಗೆ ಬೇಕಿರುವ ಅಗತ್ಯ ಸಿದ್ಧತೆಗಳನ್ನು ನಮ್ಮ ತಂಡ ಮಾಡಿಕೊಳ್ಳುತ್ತಿದೆ. ಕೋರ್ಟ್ ಚುನಾವಣಾ ಅಧಿಕಾರಿಯ ಕ್ರಮವನ್ನು ತಿರಸ್ಕಾರ ಮಾಡಿದೆ. ಹೀಗಾಗಿ ನನ್ನ ನಾಮಪತ್ರ ಮಾನ್ಯಗೊಂಡಿದೆ." ಎಂದು ಕೆ.ಎನ್.ಶಾಂತಕುಮಾರ್ ಹೇಳಿಕೆ ನೀಡಿದ್ದಾರೆ. ಮಾಜಿ ಕ್ರಿಕೆಟಿಗ, ಹಿರಿಯ ಆಡಳಿತಾಧಿಕಾರಿ ಬ್ರಿಜೇಶ್ ಪಟೇಲ್ ಬೆಂಬಲದಲ್ಲಿ ಕಣಕ್ಕಿಳಿದಿರುವ ಶಾಂತಕುಮಾರ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದರಿಂದ ಮಾಜಿ ಕ್ರಿಕೆಟಿಗ ವೆಂಕಟೇಶ್ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಆದರೆ ಈಗ ಚುನಾವಣೆ ಮೂಲಕವೇ ಅಧ್ಯಕ್ಷ ಸ್ಥಾನಕ್ಕೇರುವವರು ಯಾರು ಎನ್ನುವುದು ನಿರ್ಧಾರವಾಗಲಿದ್ದು, ಪ್ರಬಲ ಪೈಪೋಟಿಯೂ ಕಂಡುಬರಲಿದೆ.