ಬೆಂಗಳೂರು, ನ. 25 (DaijiworldNews/TA): ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡಮಿ (ಕೆಎಸ್ಸಿಎ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಭಾರತದ ಮಾಜಿ ವೇಗಿ ಬೌಲರ್ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿರೋಧಿ ಬಣದಿಂದ ಸ್ಪರ್ಧಿಸಿದ್ದ ಶಾಂತಕುಮಾರ್ ಅವರ ನಾಮಪತ್ರ ಪರಿಶೀಲನೆ ವೇಳೆ ಅಸಿಂಧುವಾಗಿದೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದ ಪರಿಣಾಮ ಪ್ರಸಾದ್ ಏಕೈಕ ಅಭ್ಯರ್ಥಿಯಾಗಿ ಆಯ್ಕೆ ಯಾಗಿದ್ದಾರೆ.

ಡಿಸೆಂಬರ್ 7ರಂದು ಅಧ್ಯಕ್ಷರ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನದ ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು. ಹೀಗಾಗಿ ವೆಂಕಟೇಶ್ ಪ್ರಸಾದ್ ಮತ್ತು ಶಾಂತಕುಮಾರ್ ಇಬ್ಬರೂ ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ ಶಾಂತಕುಮಾರ್ ನಾಮಪತ್ರದಲ್ಲಿ ದೋಷಗಳು ಕಂಡುಬಂದಿದ್ದು, ತಿರಸ್ಕೃತಗೊಂಡಿದೆ.
ಹೈಕೋರ್ಟ್ ಆದೇಶದ ಅನುಷ್ಠಾನ : ಚುನಾವಣಾಧಿಕಾರಿ ಡಿಸೆಂಬರ್ 30ಕ್ಕೆ ಚುನಾವಣೆ ಮುಂದೂಡಲು ಬರೆದಿದ್ದ ಪತ್ರವನ್ನು ಪ್ರಶ್ನಿಸಿ ಬಿ.ಕೆ. ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ (ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್) ಡಿಸೆಂಬರ್ 7ರೊಳಗೆ ಚುನಾವಣೆಯನ್ನು ನಡೆಸಲೇಬೇಕು ಎಂದು ಸ್ಪಷ್ಟ ಆದೇಶ ನೀಡಿತ್ತು. ಇದನ್ನು ಅನುಸರಿಸಿ ಹಾಲಿ ಬೈಲಾ, ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಪ್ರಕಾರವೇ ಚುನಾವಣಾ ಪ್ರಕ್ರಿಯೆ ಜರುಗಿದೆ.
12 ವರ್ಷಗಳ ನಂತರ ಮರುಪ್ರವೇಶ: ವೆಂಕಟೇಶ್ ಪ್ರಸಾದ್ 12 ವರ್ಷಗಳ ಬಳಿಕ ಮತ್ತೆ ಕೆಎಸ್ಸಿಎ ಆಡಳಿತಕ್ಕೆ ವಾಪಸ್ಸಾಗುತ್ತಿದ್ದಾರೆ. 2010–2013ರ ಅವಧಿಯಲ್ಲಿ ಅವರು ಕೆಎಸ್ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ವೇಳೆ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರೆ, ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು.
ಪ್ರಸಾದ್ ಅವರ ಕ್ರಿಕೆಟ್ ಸಾಧನೆ : 1994ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ವೆಂಕಟೇಶ್ ಪ್ರಸಾದ್, ಭಾರತದ ಯಶಸ್ವಿ ವೇಗಿ ಬೌಲರ್ಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. 33 ಟೆಸ್ಟ್ ಪಂದ್ಯಗಳಲ್ಲಿ - 96 ವಿಕೆಟ್, 161 ಏಕದಿನ ಪಂದ್ಯಗಳಲ್ಲಿ - 196 ವಿಕೆಟ್ ಕಬಳಿಸಿರುವ ಅವರು 1990ರ ದಶಕದ ಭಾರತದ ಬೌಲಿಂಗ್ ದಾಳಿಯ ಪ್ರಮುಖರಲ್ಲಿ ಒಬ್ಬರು.