ಮುಂಬೈ, ನ. 19 (DaijiworldNews/AK): ಐಸಿಸಿ ಏಕದಿನ ಬ್ಯಾಟರ್ಗಳ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿರುವುದು ನ್ಯೂಝಿಲೆಂಡ್ ಬ್ಯಾಟರ್ ಡೇರಿಲ್ ಮಿಚೆಲ್. 46 ವರ್ಷಗಳ ಬಳಿಕ ನ್ಯೂಝಿಲೆಂಡ್ ದಾಂಡಿಗ ಡೇರಿಲ್ ಮಿಚೆಲ್ ಏಕದಿನ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡ ನ್ಯೂಝಿಲೆಂಡ್ನ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಏಕದಿನ ಬ್ಯಾಟರ್ಗಳ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಗ್ರಸ್ಥಾನಕ್ಕೇರಿದ್ದ ಹಿಟ್ಮ್ಯಾನ್ ಈ ಬಾರಿ ಒಂದು ಸ್ಥಾನ ಕುಸಿತ ಕಂಡಿದ್ದು, ಒಟ್ಟು 781 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಯುವ ದಾಂಡಿಗ ಇಬ್ರಾಹಿಂ ಝದ್ರಾನ್ ಕಾಣಿಸಿಕೊಂಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಭಾರತ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಇದ್ದಾರೆ.
ಐದನೇ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿರುವುದು ವಿರಾಟ್ ಕೊಹ್ಲಿ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಕೊಹ್ಲಿ ಏಕದಿನ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 725 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಅಲಂಕರಿಸಿದ್ದಾರೆ.