ಮುಂಬೈ, ನ. 18 (DaijiworldNews/AA): ಭಾರತ ತಂಡದಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ನಿರ್ಮಾಣವಾಗಿದೆ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಸೌತ್ ಆಫ್ರಿಕಾ ವಿರುದ್ಧದ ಸೋಲಿನ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.

"ಸರ್ಫರಾಝ್ ಖಾನ್ನಂತಹ ಆಟಗಾರ ಶತಕ ಬಾರಿಸಿದರೂ ಆತನನ್ನು ಭಾರತ ತಂಡದಿಂದ ಕೈ ಬಿಡಲಾಯಿತು. 87 ರನ್ ಗಳಿಸಿದ್ದರೂ ಸಾಯಿ ಸುದರ್ಶನ್ ಅವರಿಗೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ನಲ್ಲಿ ಸ್ಥಾನ ನೀಡಲಾಗಿಲ್ಲ. ಇವೆಲ್ಲವೂ ಇತರೆ ಆಟಗಾರರ ಮೇಲೂ ಪ್ರಭಾವ ಬೀರುತ್ತದೆ. ಇಂತಹ ನಿರ್ಧಾರಗಳು ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ" ಎಂದು ಅವರು ತಿಳಿಸಿದರು.
"ಚೆನ್ನಾಗಿ ಆಡಿದ ಮೇಲೂ ತಂಡದಿಂದ ಕೈ ಬಿಡುವುದಾದರೆ, ಉತ್ತಮವಾಗಿ ಆಡಿದ ಆಟಗಾರರನಿಗೂ ತನ್ನ ಸ್ಥಾನ ಖಾಯಂ ಎಂಬ ಭಾವನೆ ಬರುವುದಿಲ್ಲ. ಇಲ್ಲ, ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ವಿಶ್ವಾಸವೇ ಇರುವುದಿಲ್ಲ. ಟೀಮ್ ಇಂಡಿಯಾ ಆಟಗಾರರಲ್ಲಿ ಇಂತಹ ಆತ್ಮ ವಿಶ್ವಾಸದ ಕೊರತೆಯಿದೆ. ಇದೇ ಕಾರಣದಿಂದಾಗಿ ಭಾರತೀಯ ಆಟಗಾರರು ಭಯದಿಂದ ಆಡುತ್ತಿದ್ದಾರೆ" ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
"100 ರನ್ ಗಳಿಸಿದ ಬಳಿಕ ಕೂಡ ಸರ್ಫರಾಝ್ ಖಾನ್ಗೆ ಭಾರತದಲ್ಲಿ ಸ್ಥಾನ ಸಿಕ್ಕಿಲ್ಲ. ಶತಕ ಬಾರಿಸಿದ ನಂತರವೂ ಅವರು ಮತ್ತೆ ತಂಡಕ್ಕೆ ಮರಳಲು ಸಾಧ್ಯವಾಗುವುದಿಲ್ಲ. ಸಾಯಿ ಸುದರ್ಶನ್ ಕಳೆದ ಮ್ಯಾಚ್ನಲ್ಲಿ 87 ರನ್ ಬಾರಿಸಿದ್ದರು. ಇದಾಗ್ಯೂ ಅವರನ್ನು ಕೊಲ್ಕತ್ತಾ ಟೆಸ್ಟ್ನಿಂದ ಕೈ ಬಿಡಲಾಯಿತು. ಇಂತಹ ನಡೆಗಳಿಂದ ಆಟಗಾರರಲ್ಲಿ ಅಭದ್ರತೆ ಕಾಡುತ್ತದೆ. ಇದೇ ಕಾರಣದಿಂದ ಆಗಿ ಕೊಲ್ಕತ್ತಾದ ಟರ್ನಿಂಗ್ ಟ್ರ್ಯಾಕ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ವಿಫಲರಾಗಿದ್ದಾರೆ" ಎಂದು ಹೇಳಿದರು.