ಬೆಂಗಳೂರು, ಅ. 26 (DaijiworldNews/TA): ರಣಜಿ ಟ್ರೋಫಿ 2025–26ರ ಎರಡನೇ ಸುತ್ತಿನಲ್ಲಿ ಕರ್ನಾಟಕದ ತಾರೆ, ಬ್ಯಾಟ್ಸ್ಮನ್ ಕರುಣ್ ನಾಯರ್ ಸ್ಫೋಟಕ ಶತಕ ಬಾರಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಗೋವಾ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ 174 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಂಡ ಕರ್ನಾಟಕ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ಕರುಣ್, ತಂಡಕ್ಕೆ ಬೃಹತ್ ಮೊತ್ತ ಕಟ್ಟಿಕೊಟ್ಟರು. ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಅವರ ಈ ಶತಕ ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗಿದೆ.

ಅಕ್ಟೋಬರ್ 25ರಿಂದ ಆರಂಭವಾದ ಎರಡನೇ ಸುತ್ತಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 65 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಸಂದರ್ಭದಲ್ಲೇ ಕರುಣ್ ನಾಯರ್ ಎಚ್ಚರಿಕೆಯಿಂದ ಆಟ ಆರಂಭಿಸಿ, ನಂತರ ಅವರು ತಂಡವನ್ನು ಚೇತರಿಸಿಕೊಳ್ಳುವಂತೆ ಮಾಡಿದರು. ಮೊದಲ ದಿನದಾಟದಲ್ಲಿ 138 ಎಸೆತಗಳಲ್ಲಿ 86 ರನ್ ಬಾರಿಸಿ ಅಜೇಯರಾಗಿ ಉಳಿದ ಕರುಣ್, ಎರಡನೇ ದಿನವೂ ತಮ್ಮ ಇನ್ನಿಂಗ್ಸ್ ಮುಂದುವರಿಸಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಶತಕ ಬಾರಿಸಿದರು.
ಅಲ್ಲಿಗೆ ನಿಲ್ಲದ ಕರುಣ್ ದ್ವಿಶತಕದತ್ತ ದಾಪುಗಾಲಿಟ್ಟರೂ ಉಳಿದ ಬ್ಯಾಟರ್ಗಳಿಂದ ಬೆಂಬಲ ಸಿಗದೆ 267 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ ಅಜೇಯ 174 ರನ್ಗಳಲ್ಲಿ ನಿಲ್ಲಬೇಕಾಯಿತು. ಅವರ ಅದ್ಭುತ ಬ್ಯಾಟಿಂಗ್ನಿಂದಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 371 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಟೀಂ ಇಂಡಿಯಾದಿಂದ ಹೊರಬಿದ್ದ ನಂತರ ಕರುಣ್ ನಾಯರ್ಗೆ ಈ ಇನ್ನಿಂಗ್ಸ್ ಬಹುಮಟ್ಟಿಗೆ ಪ್ರಾಮುಖ್ಯತೆಯಾಗಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಅವಕಾಶ ಸಿಕ್ಕಿದ್ದರೂ, ನಿರೀಕ್ಷಿತ ಪ್ರದರ್ಶನ ನೀಡಲಾಗದೆ ಅವರು ಬೇಗನೇ ತಂಡದಿಂದ ಕೈಬಿಡಲ್ಪಟ್ಟಿದ್ದರು. ಆದರೆ, ತನ್ನ ಆಟದ ಮೇಲೆ ವಿಶ್ವಾಸ ಕಳೆದುಕೊಳ್ಳದೆ ಕರುಣ್ ಈಗ ಪುನಃ ಕಮ್ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.
ರಣಜಿ ಟ್ರೋಫಿಯ ಈ ಸೀಸನ್ನಲ್ಲಿ ಕರುಣ್ ನಾಯರ್ ಅವರ ಎರಡನೇ ಉತ್ತಮ ಇನ್ನಿಂಗ್ಸ್ ಇದಾಗಿದೆ. ಮೊದಲ ಪಂದ್ಯದಲ್ಲಿಯೂ ಅವರು 73 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇತ್ತೀಚಿನ ಪ್ರದರ್ಶನದಿಂದಾಗಿ ಅವರುಮ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆಯುವ ಸಾಧ್ಯತೆ ಹೆಚ್ಚಾಗಿದೆ. ಕರ್ನಾಟಕ ಪರ ಶ್ರೇಷ್ಠ ಪ್ರದರ್ಶನ ನೀಡಿದ ಕರುಣ್ ನಾಯರ್ ಮತ್ತೆ ಟೀಂ ಇಂಡಿಯಾದ ಬಾಗಿಲು ತಟ್ಟುತ್ತಿದ್ದಾರೆ ಎನ್ನುವುದು ಕ್ರಿಕೆಟ್ ವಲಯದ ಅಭಿಪ್ರಾಯವಾಗಿದೆ.