ಮುಂಬೈ, ಅ. 21 (DaijiworldNews/AA): ಏಷ್ಯಾ ಕಪ್ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಅಧಿಕೃತವಾಗಿ ಇ-ಮೇಲ್ ಪತ್ರ ಬರೆದಿದೆ.

ಕಳೆದ ಸೆಪ್ಟೆಂಬರ್ 28ರಂದು ನಡೆದ ಟಿ20 ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ, ಪಾಕ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿತು. ಆದರೆ ನಖ್ವಿ ಅವರಿಂದ ಟ್ರೋಫಿ ಪಡೆಯಲು ಟೀಂ ಇಂಡಿಯಾ ನಿರಾಕರಿಸಿತು. ಹೀಗಾಗಿ ನಖ್ವಿ ತಮ್ಮ ಜೊತೆಗೆ ಟ್ರೋಫಿಯನ್ನ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಭಾರತ ತಂಡ ಗೆದ್ದಿರುವ ಟ್ರೋಫಿಯನ್ನ ಹಿಂದಿರುಗಿಸುವಂತೆ ಹೇಳಿದೆ.
ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಬಿಸಿಸಿಐ ನಖ್ವಿ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಅವರ ಕಡೆಯಿಂದ ಯಾವುದೇ ಉತ್ತರ ಬರದಿದ್ದರೆ, ಐಸಿಸಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದೆ.
ಪ್ರಸ್ತುತ ಭಾರತ ಗೆದ್ದಿರುವ ಏಷ್ಯಾಕಪ್ ಟ್ರೋಫಿ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲಿದೆ. ತಮ್ಮ ಅನುಮತಿಯಿಲ್ಲದೇ ಯಾರೋ ಟ್ರೋಫಿಯನ್ನ ಹಸ್ತಾಂತರಿಸಬಾರದು. ಒಂದು ವೇಳೆ ಹಸ್ತಾಂತರಿಸಬೇಕಿದ್ರೆ, ನಾನೇ ಭಾರತ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ ಟ್ರೋಫಿ ಹಸ್ತಾಂತರಿಸೋದಾಗಿ ಎಂದು ನಖ್ವಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.