ಇಸ್ಲಾಮಾಬಾದ್, ಅ. 21 (DaijiworldNews/AA): ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಿದ್ದಕ್ಕೆ ಮೊಹಮ್ಮದ್ ರಿಜ್ವಾನ್ ಅವರನ್ನು ನಾಯಕ ಪಟ್ಟದಿಂದ ಇಳಿಸಲಾಗಿದೆ ಎಂದು ಪಾಕಿಸ್ತಾನ ತಂಡದ ಮಾಜಿ ಆಟಗಾರ ರಶೀದ್ ಲತೀಫ್ ಅವರು ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಿಜ್ವಾನ್ ಅವರ ಜಾಗಕ್ಕೆ ಶಾಹೀನ್ ಶಾ ಅಫ್ರಿದಿಯನ್ನು ನೇಮಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಮೊಹಮ್ಮದ್ ರಿಜ್ವಾನ್ ಪ್ಯಾಲೆಸ್ಟೈನ್ ಪರವಾಗಿ ಬಹಿರಂಗವಾಗಿ ಮಾತನಾಡಿದ್ದರು. ಈ ಕಾರಣಕ್ಕೆ ಅವರನ್ನು ನಾಯಕ ಸ್ಥಾನದಿಂದ ತೆಗೆಯಲಾಗಿದೆ" ಎಂದು ಆರೋಪ ಮಾಡಿದ್ದಾರೆ.
"ಕೋಚ್ ಮೈಕ್ ಹೆಸ್ಸನ್ ಅವರು ರಿಜ್ವಾನ್ ಅವರ ಡ್ರೆಸ್ಸಿಂಗ್ ರೂಮ್ ಸಂಸ್ಕೃತಿಯನ್ನು ಇಷ್ಟಪಡುತ್ತಿಲ್ಲ. ಇಸ್ಲಾಮಿಕ್ ದೇಶದಲ್ಲಿ ಇಸ್ಲಾಮಿಕ್ ಅಲ್ಲದ ನಾಯಕ ಬರಬೇಕು ಎಂಬ ಮನಸ್ಥಿತಿಯನ್ನು ಪಿಸಿಬಿ ಹೊಂದಿದೆ. ಪ್ಯಾಲೆಸ್ಟೈನ್ ಧ್ವಜವನ್ನು ಬಹಿರಂಗವಾಗಿ ಪ್ರದರ್ಶನ ಮಾಡಿದ್ದಕ್ಕೆ ಅವರನ್ನು ತೆಗೆಯುವುದು ಎಷ್ಟು ಸರಿ?" ಎಂದು ಪ್ರಶ್ನೆ ಮಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಕಳಪೆ ಪ್ರದರ್ಶನ ನೀಡಿದ್ದಕ್ಕೆ ರಿಜ್ವಾನ್ ಅವರನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಿ ಶಾಹೀನ್ ಶಾ ಅಫ್ರಿದಿ ಅವರನ್ನು ನೇಮಿಸಲಾಗಿದೆ.
ಮೊಹಮ್ಮದ್ ರಿಜ್ವಾನ್ ಇಸ್ಲಾಂ ಮೌಲ್ಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಯಾವುದೇ ಹೋಟೆಲ್ಗೆ ಹೋದಾಗ ರಿಜ್ವಾನ್ ಮೊದಲು ನಮಾಜ್ ಕೊಠಡಿಯನ್ನು ಹುಡುಕುತ್ತಾರೆ. ನಮಾಜ್ ಮಾಡಲು ಕೋಣೆಯಲ್ಲಿ ಬಿಳಿ ಬಟ್ಟೆಯನ್ನು ಹಾಸುತ್ತಾರೆ. ಮುಸ್ಲಿಮೇತರರು ಕೋಣೆ ಪ್ರವೇಶಕ್ಕೆ ನಿರ್ಬಂಧ ಹೇರುತ್ತಾರೆ. ನಮಾಜ್ ಸಮಯಕ್ಕಾಗಿ ವಾಟ್ಸಪ್ ಗ್ರೂಪ್ ರಚನೆ ಮಾಡುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟಿಗ ಇಮಾಮ್ ಉಲ್ ಹಕ್ ಈ ಹಿಂದೆ ಹೇಳಿದ್ದರು.