ಮುಂಬೈ,ಸೆ. 17 (DaijiworldNews/AK): ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವದ ಬಿಡ್ ಅನ್ನು ಅಪೊಲೊ ಟಯರ್ಸ್ ಗೆದ್ದುಕೊಂಡಿದೆ.ಮುಂದಿನ ಮೂರು ವರ್ಷಗಳ (2025–2028) ಪ್ರಾಯೋಜಕತ್ವಕ್ಕಾಗಿ ಗುರುಗ್ರಾಮ ಮೂಲದ ಅಪೊಲೊ ಟಯರ್ಸ್ ಬಿಸಿಸಿಐಗೆ 579 ಕೋಟಿ ರೂ. ನೀಡಲಿದೆ. ಈ ಜೆರ್ಸಿ ಒಪ್ಪಂದ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಪ್ರಾಯೋಜಕತ್ವ ಒಪ್ಪಂದವಾಗಿ ಹೊರಹೊಮ್ಮಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ 121 ದ್ವಿಪಕ್ಷೀಯ ಪಂದ್ಯಗಳು ಮತ್ತು 21 ಐಸಿಸಿ ಆಯೋಜಸುವ ಟೂರ್ನಿ ಆಡಲಿದೆ.

ಬಿರ್ಲಾ ಆಪ್ಟಸ್ ಪೇಂಟ್ಸ್ ಬಿಡ್ನಲ್ಲಿ ಭಾಗವಹಿಸುವ ಆಸಕ್ತಿ ವ್ಯಕ್ತಪಡಿಸಿತ್ತು. ಆದರೆ ಅಂತಿಮ ಬಿಡ್ ವೇಳೆ ಹೊರಗೆ ಉಳಿದಿತ್ತು. ಅಂತಿಮ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆನ್ಲೈನ್ ದೃಶ್ಯ ಸಂವಹನ ವೇದಿಕೆ ಕಾನ್ವಾ 544 ಕೋಟಿ ರೂ., ಜೆಕೆ ಸಿಮೆಂಟ್ಸ್ 477 ಕೋಟಿ ರೂ. ಬಿಡ್ ಮಾಡಿತ್ತು.
ಅಪೊಲೊ 579 ಕೋಟಿ ರೂ. ಬಿಡ್ ಮಾಡಿದ್ದರಿಂದ ಪ್ರತಿ ಪಂದ್ಯಕ್ಕೆ ಸರಾಸರಿ 4.77 ಕೋಟಿ ರೂ. ಹಣವನ್ನು ಪಾವತಿಸಿದಂತಾಗುತ್ತದೆ. ಬಿಸಿಸಿಐ ದ್ವಿಪಕ್ಷೀಯ ಪಂದ್ಯಕ್ಕೆ 3.5 ಕೋಟಿ ರೂ., ಐಸಿಸಿ ಪಂದ್ಯಕ್ಕೆ 1.5 ಕೋಟಿ ರೂ. ಮೂಲ ಬೆಲೆಯನ್ನು ನಿಗದಿ ಪಡಿಸಿತ್ತು. ಆದರೆ ಬಿಸಿಸಿಐ ನಿಗದಿ ಪಡಿಸಿದ ಮೂಲ ಬೆಲೆಗಿಂತಲೂ ಜಾಸ್ತಿ ಹಣವನ್ನು ಅಪೊಲೊ ಪಾವತಿಸಿದಂತಾಗುತ್ತದೆ.
ಈ ಮೊದಲು Dream11 ಜೆರ್ಸಿ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. 2023 ರಿಂದ 2026 ವರೆಗಿನ ಅವಧಿಯ ಪಂದ್ಯಗಳಿಗೆ ಡ್ರೀಮ್11 358 ಕೋಟಿ ರೂ. ನೀಡಿ ಬಿಡ್ ಗೆದ್ದುಕೊಂಡಿತ್ತು. Dream11 ಪ್ರಾಯೋಜಕತ್ವದ ಅವಧಿಯಲ್ಲಿ ಪ್ರತಿ ಪಂದ್ಯದಿಂದ ಬಿಸಿಸಿಐಗೆ ಸರಾಸರಿ 4 ಕೋಟಿ ರೂ. ಸಿಗುತ್ತಿತ್ತು.
ಅಪೊಲೊ ಟಯರ್ಸ್ 100 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಟಯರ್ ಮಾರುಕಟ್ಟೆಯನ್ನು ಹೊಂದಿದೆ. ಈಗ ಟೀಂ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಪಡೆಯುವ ಮೂಲಕ ತನ್ನ ಬ್ರ್ಯಾಂಡ್ ಹೆಸರನ್ನು ಮತ್ತಷ್ಟು ದೇಶಗಳಿಗೆ ವಿಸ್ತರಿಸಬಹುದಾಗಿದೆ.