ಕ್ಯಾನ್ಬೆರಾ, ಸೆ. 02 (DaijiworldNews/AA): ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

"ಸದ್ಯ ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದಾಗ್ಯೂ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯುತ್ತೇನೆ. ನನ್ನ ಮೊದಲ ಆದ್ಯತೆ ಯಾವತ್ತಿದ್ದರೂ ಅದು ಟೆಸ್ಟ್ ಆಡುವುದು. ಹಾಗೆಯೇ 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಟಿ20 ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ" ಎಂದು ಸ್ಟಾರ್ಕ್ ತಿಳಿಸಿದ್ದಾರೆ.
"ಟೆಸ್ಟ್ ಕ್ರಿಕೆಟ್ ನನ್ನ ಅತ್ಯುನ್ನತ ಆದ್ಯತೆಯಾಗಿದೆ. ನಾನು ಆಸ್ಟ್ರೇಲಿಯಾ ಪರ ಆಡಿದ ಪ್ರತಿಯೊಂದು ಟಿ20 ಪಂದ್ಯದ ಪ್ರತಿ ನಿಮಿಷವನ್ನೂ ಪ್ರೀತಿಸುತ್ತೇನೆ. 2021 ರ ವಿಶ್ವಕಪ್ ಅನ್ನು ಮರೆಯಲು ಸಾಧ್ಯವಿಲ್ಲ. ನಾವು ಗೆದ್ದಿದ್ದಕ್ಕಾಗಿ ಮಾತ್ರವಲ್ಲ, ಅದೊಂದು ಅದ್ಭುತ ತಂಡ. ಟೂರ್ನಿ ಹಾದಿಯುದ್ದಕ್ಕೂ ಮೋಜಿನಿಂದ ಕೂಡಿತ್ತು" ಎಂದು ಹೇಳಿದ್ದಾರೆ.
ಸ್ಟಾರ್ಕ್ ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನಾಡಿದ್ದಾರೆ. ಅದರಲ್ಲೂ 2021 ರಲ್ಲಿ ಚೊಚ್ಚಲ ಬಾರಿ ಟಿ20 ವಿಶ್ವಕಪ್ ಗೆದ್ದುಕೊಡುವಲ್ಲಿ ಸ್ಟಾರ್ಕ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ 13 ವರ್ಷಗಳ ಟಿ20 ಕೆರಿಯರ್ಗೆ ವಿದಾಯ ಹೇಳಲು ಸ್ಟಾರ್ಕ್ ನಿರ್ಧರಿಸಿದ್ದಾರೆ.
ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನಾಡಿರುವ ಮಿಚೆಲ್ ಸ್ಟಾರ್ಕ್ 1458 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 1881 ರನ್ಗಳನ್ನು ನೀಡಿರುವ ಅವರು ಒಟ್ಟು 79 ವಿಕೆಟ್ಗಳನ್ನು ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಆಗಿದ್ದಾರೆ.