ಪ್ಯಾರಿಸ್, ಆ. 31 (DaijiworldNews/TA): 2025ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಮತ್ತೊಮ್ಮೆ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಎರಡು ಬಾರಿ ಪದಕ ಗೆದ್ದ ಭಾರತದ ಮೊದಲ ಜೋಡಿಯಾದ ಈ ಇಬ್ಬರು ಆಟಗಾರರು, ದೇಶದ ಬ್ಯಾಡ್ಮಿಂಟನ್ ಕ್ರೀಡೆಗೆ ಮತ್ತೊಂದು ಮುಕುಟವಿಟ್ಟಿದ್ದಾರೆ.

ಈ ಹಿಂದೆ 2022ರಲ್ಲಿ ಕೂಡ ಈ ಜೋಡಿ ಕಂಚಿನ ಪದಕ ಜಯಿಸಿದ್ದರೆ, ಈಗ 2025ರ ಟೂರ್ನಿಯಲ್ಲಿ ಮತ್ತೆ ಮೂರನೇ ಸ್ಥಾನ ಪಡೆದಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಲಿ ಯಿಯು ಮತ್ತು ಬೊ ಯಾಂಗ್ ಚೆನ್ ವಿರುದ್ಧ 19-21, 21-18, 12-21 ಅಂತರದಲ್ಲಿ ತೀವ್ರ ಪೈಪೋಟಿಯಲ್ಲಿ ಸೋತರೂ ಕಂಚಿನ ಪದಕವನ್ನು ತಮ್ಮದಾಗಿಸಿದ್ದಾರೆ.
ಡಬಲ್ಸ್ ವಿಭಾಗದಲ್ಲಿ ಹಿಂದೆಂದೂ ಯಾವುದೇ ಭಾರತೀಯ ಜೋಡಿ ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಿಲ್ಲ. ಸಾತ್ವಿಕ್ ಮತ್ತು ಚಿರಾಗ್ ಈ ಮೈಲಿಗಲ್ಲನ್ನು ತಲುಪಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2023ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಈ ಜೋಡಿ ಇತಿಹಾಸ ರಚಿಸಿದ್ದರು. ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಇಯೊ ಯೀ ಜೋಡಿಯನ್ನು ಫೈನಲ್ನಲ್ಲಿ ಸೋಲಿಸಿ ಭಾರತಕ್ಕೆ ಈ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟ ಐತಿಹಾಸಿಕ ಸಾಧನೆ ಮಾಡಿದ್ದರು.
ಇದೀಗ ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡನೇ ಬಾರಿಗೆ ಪದಕ ಗೆಲ್ಲುವ ಮೂಲಕ ಅವರು ಭಾರತೀಯ ಬ್ಯಾಡ್ಮಿಂಟನ್ಗೆ ಹೊಸ ಬೆಳಕು ತಂದಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನದ ಪದಕದತ್ತ ಅವರ ಓಟ ಮುಂದುವರಿಯಲಿದೆಯೆಂಬ ಭರವಸೆ ಹೆಮ್ಮೆಯಿಂದ ಮೂಡುತ್ತಿದೆ.