ಮುಂಬೈ, ಆ. 03 (DaijiworldNews/AA): ಇತ್ತೀಚೆಗಷ್ಟೇ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಆದರೆ ಇದೀಗ ಬೇರ್ಪಡುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಸೈನಾ ನೆಹ್ವಾಲ್ ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಸೈನಾ ಇಬ್ಬರೂ ಮತ್ತೆ ಒಂದಾಗುತ್ತಿದ್ದೇವೆ ಎಂದು ದೃಢಪಡಿಸಿದ್ದಾರೆ. ಇಬ್ಬರ ಫೋಟೋ ಜೊತೆಗೆ 'ಕೆಲವೊಮ್ಮೆ ದೂರವಾಗಿರುವುದು ಹತ್ತಿರವಾಗಿರುವ ಮೌಲ್ಯವನ್ನು ಕಲಿಸುತ್ತದೆ, ನಾವು ಮತ್ತೆ ಒಂದಾಗಲು ತೀರ್ಮಾನಿಸಿದ್ದೇವೆ' ಎಂದು ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ತಿಳಿದು ಅವರ ಅಭಿಮಾನಿಗಳು ಶುಭಹಾರೈಸಿದ್ದಾರೆ.
ಈ ಹಿಂದೆ ಸೈನಾ ಅವರು ಸಾಮಾಜಿಕ ಜಾಲತಾಣದಲ್ಲಿ ವಿಚ್ಛೇದನ ಪಡೆಯುತ್ತಿರುವುದಾಗಿ ಪ್ರಕಟಿಸಿದ್ದರು. "ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಆಲೋಚನೆಯ ನಂತರ ನಾವಿಬ್ಬರು ಬೇರೆಯಾಗಲು ನಿರ್ಧರಿಸಿದ್ದೇವೆ. ನೆನಪುಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಮುಂದುವರಿಯಲು ಉತ್ತಮವಾದದ್ದನ್ನು ಮಾತ್ರ ಬಯಸುತ್ತೇನೆ. ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ" ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಿಳಿಸಿದ್ದರು.