ಬೆಂಗಳೂರು, ಜು. 08 (DaijiworldNews/AA): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಸಿಐಡಿ ಬಹುತೇಕ ತನಿಖೆ ಮುಗಿಸಿದ್ದು, ವಿರಾಟ್ ಕೊಹ್ಲಿಗಾಗಿ ಆರ್ಸಿಬಿ ಮ್ಯಾನೇಜ್ಮೆಂಟ್ ತೆಗೆದುಕೊಂಡ ಆತುರದ ನಿರ್ಧಾರವೇ 11 ಜನರ ಸಾವಿಗೆ ಕಾರಣ ಎಂದು ವರದಿ ಸಿದ್ಧಪಡಿಸಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಂಟಾದ ಕಾಲ್ತುಳಿತ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್ಐಆರ್ಗಳ ಬಗ್ಗೆ ಸಿಐಡಿ ತನಿಖೆ ನಡೆಸಿತ್ತು. ಇದೀಗ ಸಿಐಡಿ ಕಾಲ್ತುಳಿತಕ್ಕೆ ಕಾರಣವಾದ ಅಂಶಗಳನ್ನ ಪತ್ತೆ ಮಾಡಿದೆ. ಸಾವಿರಾರು ವಿಡಿಯೋಗಳು, ಸಿಸಿಟಿವಿ ಕ್ಯಾಮೆರಾ, ಚಿನ್ನಸ್ವಾಮಿ ಸ್ಟೇಡಿಯಂನ 13 ಗೇಟ್ಗಳಲ್ಲಿ ಅವ್ಯವಸ್ಥೆ, ಪೊಲೀಸರ ನಿಯೋಜನೆ, ನೂಕುನುಗ್ಗಲು ಉಂಟಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿ, ಸಿಐಡಿ ವರದಿ ತಯಾರಿಸಿದೆ.
ಆರ್ಸಿಬಿ ಸಿಇಓ ರಾಜೇಶ್ ಮೆನನ್, ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯಿಂದ ಕಾರ್ಯಕ್ರಮ ಆಯೋಜನೆ ತೀರ್ಮಾನ ಮಾಡಲಾಗಿತ್ತು. ವಿರಾಟ್ ಕೊಹ್ಲಿಯ ಕಾರಣ ಕೊಟ್ಟು ಕೊಹ್ಲಿ ಆಪ್ತ ನಿಖಿಲ್ ಸೋಸ್ಲೆ ಕೆಎಸ್ಸಿಎ ಮೇಲೆ ಅತಿಯಾದ ಒತ್ತಡ ಹಾಕಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮ ಮುಂದೂಡಿಕೆ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕೆಎಸ್ಸಿಎ ಅಭಿಪ್ರಾಯ ನೀಡಿತ್ತು. ಆದರೆ ಕೊಹ್ಲಿ ಕಾರಣ ಹೇಳಿ ನಾಳೆಯೇ ಕಾರ್ಯಕ್ರಮ ಆಯೋಜನೆ ಆಗಬೇಕು ಎಂದು ನಿಖಿಲ್ ಸೋಸಲೆ ಒತ್ತಡ ಹಾಕಿದ್ದರು. ಕೊಹ್ಲಿ ಯುಕೆಗೆ ಹೋಗಬೇಕು. ಮುಂದೂಡಿದರೆ ಕೊಹ್ಲಿ ಬರುವುದಿಲ್ಲ ಎಂದಿದ್ದರು. ನಿಖಿಲ್ ಸೋಸಲೆ ಒತ್ತಡಕ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಿಕೆಟ್ ಗೊಂದಲ, ಟ್ವೀಟ್ ಹಿಂದೆಯೂ ನಿಖಿಲ್ ಸೋಸಲೆ ಕಾರಣ. ಟ್ವೀಟ್ನಿಂದಲೇ ಸಾಕಷ್ಟು ಜನ ಸೇರಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಫ್ರೀ ಟಿಕೆಟ್ ಅನೌನ್ಸ್ ಮಾಡಿದ್ದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪೊಲೀಸ್ ಬಂದೋಬಸ್ತ್ ನಲ್ಲಿ ಎಡವಟ್ಟಾಗಿತ್ತು. ಕಾಲ್ತುಳಿತದ ವೇಳೆ ಗೇಟ್ಗಳ ಬಳಿ ಪೊಲೀಸರೇ ಇರಲಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹೆಚ್ಚಿನ ಬಂದೋಬಸ್ತ್ ಆಗಿರಲಿಲ್ಲ. ವಿಧಾನಸೌಧದ ಬಳಿಯೇ ಪೊಲೀಸ್ ಇಲಾಖೆ ಹೆಚ್ಚು ಗಮನ ಹರಿಸಿತ್ತು ಎಂದು ಸಿಐಡಿ ವರದಿಯಲ್ಲಿ ತಿಳಿಸಿದೆ.
ಸ್ಟೇಡಿಯಂ ಬಂದೋಬಸ್ತ್ ಬಗ್ಗೆ ಪೊಲೀಸ್ ಅಧಿಕಾರಿಗಳ ನಿಯೋಜನೆ ಬಗ್ಗೆ ರೋಲ್ಕಾಲ್ ಆಗಿರಲಿಲ್ಲ. ಕೆಎಸ್ಆರ್ಪಿ ಸಿಬ್ಬಂದಿಗೂ ಸರಿಯಾದ ಸಂದೇಶ ನೀಡಿರಲಿಲ್ಲ. ಐಪಿಎಲ್ ಮ್ಯಾಚ್ ವೇಳೆಯಂತೆಯೇ ಕೆಎಸ್ಆರ್ಪಿಗೆ ಸಂದೇಶ ನೀಡಲಾಗಿತ್ತು. ಲಕ್ಷಾಂತರ ಜನ ಸೇರುತ್ತಾರೆ. ಸಿಬ್ಬಂದಿ ಗಸ್ತು ಹಾಗೂ ಬಂದೋಬಸ್ತ್ ಬಗ್ಗೆ ಕೆಎಸ್ಆರ್ಪಿ ಸಿಬ್ಬಂದಿಗೂ ಸೂಚನೆ ನೀಡಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಸದ್ಯ ಈ ಎಲ್ಲಾ ಅಂಶಗಳನ್ನ ಸಿಐಡಿ ವರದಿಯಲ್ಲಿ ಉಲ್ಲೇಖಿಸಿದೆ. ಮುಂದಿನ ದಿನಗಳಲ್ಲಿ ಉಳಿದ ತನಿಖೆ ಮುಗಿಸಿ ಕೋರ್ಟ್ಗೆ ವರದಿ ಸಲ್ಲಿಸಲಿದೆ.