ನವದೆಹಲಿ, ಜು. 08 (DaijiworldNews/TA): ಗಾಜಿಯಾಬಾದ್ನ ಇಂದಿರಾಪುರಂ ನಿವಾಸಿ ಯುವತಿಯೊಬ್ಬಳು, ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದು, ಇದೀಗ ಪೊಲೀಸರು ಪ್ರಕರಣವನ್ನು ಸಹ ದಾಖಲಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಆಟಗಾರ ಯಶ್ ದಯಾಳ್ ಮದುವೆಯಾಗುವುದಾಗಿ ಭರವಸೆ ನೀಡಿ "ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ" ಶೋಷಣೆ ಮಾಡಿದ್ದಾರೆ ಎಂದು ಗಾಜಿಯಾಬಾದ್ ಮಹಿಳೆಯೊಬ್ಬರು ಆರೋಪಿಸಿದ ಕೆಲವು ದಿನಗಳ ನಂತರ, 27 ವರ್ಷದ ಕ್ರಿಕೆಟಿಗ ಯಶ್ ದಯಾಳ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಜೂನ್ 21 ರಂದು, ಮಹಿಳೆಯೊಬ್ಬರು ಮುಖ್ಯಮಂತ್ರಿಗಳ ಆನ್ಲೈನ್ ದೂರು ಪೋರ್ಟಲ್ ಮೂಲಕ ದೌರ್ಜನ್ಯ ಮತ್ತು ವಂಚನೆಗೆ ನ್ಯಾಯ ಕೋರಿ ದೂರು ದಾಖಲಿಸಿದ್ದರು. ಪೊಲೀಸರಿಗೆ ನೀಡಿದ ದೂರಿನಲ್ಲಿ, ತಾನು ಐದು ವರ್ಷಗಳಿಂದ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿದ್ದಾಗಿ ಆರೋಪಿಸಿದ್ದಾಳೆ.
"ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅವನು ನನ್ನೊಂದಿಗೆ ಪದೇ ಪದೇ ದೈಹಿಕ ಸಂಬಂಧ ಬೆಳೆಸಿದ್ದಾನೆ ಮತ್ತು ಅವನ ಕುಟುಂಬಕ್ಕೆ ನನ್ನನ್ನು ಪರಿಚಯಿಸಿದ್ದಾನೆ. ಅವರು ನಾನು ಅವರ ಸೊಸೆಯಾಗುತ್ತೇನೆ ಎಂದು ಭರವಸೆ ನೀಡಿದ್ದರು. ನಾನು ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ಸಂಬಂಧವನ್ನು ಉಳಿಸಿಕೊಂಡೆ" ಎಂದು ಮಹಿಳೆ ಆರೋಪಿಸಿದ್ದಾರೆ. ತಾನು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
"ಮಾನಸಿಕ ನೋವಿನಿಂದ ಹೊರಬರಲು ಸಾಧ್ಯವಾಗದೆ ನಾನು ಹಲವು ಬಾರಿ ನನ್ನ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸಿದೆ, ಮತ್ತು ಅವನು ಮತ್ತು ಅವನ ಕುಟುಂಬವು ನನಗೆ ಸುಳ್ಳು ಭರವಸೆಗಳನ್ನು ನೀಡುತ್ತಲೇ ಇತ್ತು. ಇತರ ಮಹಿಳೆಯರೊಂದಿಗಿನ ಅವನ ಸಂಬಂಧವು ನನಗೆ ಆಳವಾದ ಮಾನಸಿಕ ಆಘಾತವನ್ನುಂಟುಮಾಡಿದೆ" ಎಂದು ಅವರು ಆರೋಪಿಸಿದ್ದಾರೆ.
ದಯಾಳ್ ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಗಾಜಿಯಾಬಾದ್ನ ಉಪ ಪೊಲೀಸ್ ಆಯುಕ್ತ (ಟ್ರಾನ್ಸ್-ಹಿಂಡನ್) ಪಾಟೀಲ್ ನಿಮಿಷ್ ದಶರಥ್ ತಿಳಿಸಿದ್ದಾರೆ. ಯಶ್ ದಯಾಳ್ ಐಪಿಎಲ್ 2025 ರಲ್ಲಿ ಆರ್ಸಿಬಿ ಪರ ಆಡಿದ್ದರು. ಆರ್ಸಿಬಿ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯಶ್ ದಯಾಳ್ ಈ ಆವೃತ್ತಿಯಲ್ಲಿ 15 ಪಂದ್ಯಗಳನ್ನು ಆಡಿದ್ದು, 13 ವಿಕೆಟ್ಗಳನ್ನು ಕಬಳಿಸಿದ್ದರು. 2025 ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ತಂಡದ ವೇಗದ ಬೌಲರ್ ಯಶ್ ದಯಾಳ್ ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.