ಬೆಂಗಳೂರು, ನ.18 (DaijiworldNews/PY): ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ರಚಿಸುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

"ಈ ಜಿಲ್ಲೆಗೆ ಯಾವೆಲ್ಲಾ ತಾಲೂಕುಗಳನ್ನು ಸೇರಿಸಬೇಕು ಎನ್ನುವ ವಿಚಾರವಾಗಿ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
"ಸಚಿವ ಸಂಪುಟದಲ್ಲಿ ವಿಜಯನಗರ ಜಿಲ್ಲೆಗೆ ಒಮ್ಮತದ ಅನುಮತಿ ದೊರೆತಿದೆ. ಇದಕ್ಕಾಗಿ ಹಲವು ದಶಕಗಳಿಂದ ಹೋರಾಟ ನಡೆದಿತ್ತು. ಇದೀಗ ಸಿಎಂ ಬಿಎಸ್ವೈ ಅವರು ಐತಿಹಾಸಿಕವಾದ ತೀರ್ಪನ್ನು ಕೈಗೊಂಡಿದ್ದಾರೆ. ವಿಜಯನಗರ ಜಿಲ್ಲೆಯ ವಿಭಜನೆಯ ಬಗ್ಗೆ ಕೆಲವರ ವಿರೋಧವೂ ಇತ್ತು. ಎಲ್ಲರ ವಿಶ್ವಾಸ ತೆಗೆದುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
"ಈ ಹಿಂದಿನಿಂದಲೂ ವಿಜಯನಗರ ಜಿಲ್ಲೆಯ ರಚನೆಯ ವಿಚಾರವಾಗಿ ಹೋರಾಟ ನಡೆದಿತ್ತು. ಸಿಎಂ ಬಿಎಸ್ವೈ ಅವರು ಉತ್ತಮವಾದ ತೀರ್ಮಾನ ತೆಗೆದುಕೊಂಡಿದ್ದಾರೆ" ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.