ನವದೆಹಲಿ, ನ. 18 (DaijiworldNews/MB) : ಅಮೇರಿಕಾ ಅಧ್ಯಕ್ಷೀಯ ಸ್ಥಾನಕ್ಕೆ ಚುನಾಯಿತರಾದ ಜೋ ಬಿಡೆನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿ ಅಭಿನಂದಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮೊದಲಾದ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಡೆನ್ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ''ಅಮೇರಿಕಾ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಅವರಿಗೆ ಕರೆ ಮಾಡಿ ಮಾತನಾಡಿ ಅಭಿನಂದಿಸಿದೆ. ಇಂಡೋ-ಯುಎಸ್ ಕಾರ್ಯತಂತ್ರದ ಸಹಭಾಗಿತ್ವದ ಬಗ್ಗೆ ದೃಢವಾದ ಬದ್ಧತೆಯನ್ನು ನಾವು ಹೊಂದಿದ್ದೇವೆ. ನಮ್ಮ ಆದ್ಯತೆ ಮತ್ತು ಕಾಳಜಿಗಳ ಬಗ್ಗೆ, ಕೊರೊನಾ ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸಹಕಾರದ ಬಗ್ಗೆ ಚರ್ಚಿಸಿದ್ದೇವೆ'' ಎಂದು ತಿಳಿಸಿದ್ದಾರೆ.
ಹಾಗೆಯೇ ಮತ್ತೊಂದು ಟ್ವೀಟ್ನಲ್ಲಿ, ''ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ರೊಂದಿಗೆ ಮಾತುಕತೆ ನಡೆಸಿದೆ. ಇಂಡೋ-ಯುಎಸ್ ಸಂಬಂಧಗಳಿಗೆ ಮೂಲವಾಗಿರುವ ಭಾರತೀಯ-ಅಮೇರಿಕನ್ ಸಮುದಾಯದ ಸದಸ್ಯರಿಗೆ ಹ್ಯಾರಿಸ್ ಅವರ ಯಶಸ್ಸು ಬಹಳ ಹೆಮ್ಮೆ ಮತ್ತು ಪ್ರೇರಣೆಯಾಗಿದೆ'' ಎಂದಿದ್ದಾರೆ.