ಮೈಸೂರು, ನ. 18 (DaijiworldNews/MB) : ಸಂಸದ ಪ್ರತಾಪ ಸಿಂಹ ಮತ್ತು ಸುಮಲತಾ ಅಂಬರೀಷ್ ಮಧ್ಯೆ ವಾಕ್ಸಮರ ಮುಂದುವರಿದಿದೆ. ''ಸುಮಲತಾ ಅವರು ಸಿನಿಮಾದಲ್ಲಿ ನಟಿಸಿದವರು, ಅವರಿಗೆ ನಾಗರಹಾವು ಸಿನಿಮಾದ ಜಲೀಲ ಪಾತ್ರ ನೆನಪಾಗಿ ಆ ಡೈಲಾಗ್ ಹೊಡೆದಿರಬೇಕು'' ಎಂದು ಈಗ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರು ನವೆಂಬರ್ 12 ರ ಗುರುವಾರ ಬೆಂಗಳೂರಿಗೆ ತೆರಳುತ್ತಿದ್ದಾಗ, ಯಲಿಯೂರು ಗೇಟ್ ಸರ್ಕಲ್ ಬಳಿ ಸುತ್ತಮುತ್ತಲಿನ ಗ್ರಾಮಸ್ಥರು ಸಾರ್ವಜನಿಕರ ಅನುಕೂಲಕ್ಕಾಗಿ ಕೆಳಸೇತುವೆ ನಿರ್ಮಿಸುವಂತೆ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಿದರು. ಈ ವಿಷಯವನ್ನು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಕರೆ ಮಾಡಿ ಮಾತನಾಡುತ್ತಿರುವಾಗ ಸಂಸದ ಪ್ರತಾಪ್ ಸಿಂಹ ಸುಮಾಲತಾ ಅವರನ್ನು ಲೇವಡಿ ಮಾಡಿದ್ದರು. "ಆ ಯಮ್ಮಾ ಯಾವುದೇ ಕೆಲಸ ಮಾಡಲ್ಲ. ಮಂಡ್ಯಾಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೆ ಹೇಳಿ" ಎಂದು ಪ್ರತಾಪ್ ಸಿಂಹ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಸಂಸದೆ ಸುಮಲತಾ, ''ಸಂಸದ ಪ್ರತಾಪ್ಸಿಂಹ ಅವರು ಮಾತಾನಾಡುವಾಗ ಅರಿತುಕೊಂಡು ಮಾತನಾಡಬೇಕು, ಪೇಟೆ ರೌಡಿಯ ತರಹ ಮಾತನಾಡಬಾರದು'' ಎಂದು ಹೇಳಿದ್ದರು.
ಮಂಗಳವಾರ ಈ ಬಗ್ಗೆ ಮಾಧ್ಯಮ ಸಂಸದ ಪ್ರತಾಪ ಸಿಂಹ ಅವರನ್ನು ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಹೇಳಿ ಕೇಳಿ ಸುಮಲತಾ ಅವರು ಸಿನಿಮಾದಲ್ಲಿ ನಟಿಸಿದವರು, ಕಲಾವಿದರು. ನಾಗರಹಾವು ಸಿನಿಮಾದ ಜಲೀಲ ಪಾತ್ರ ಅವರಿಗೆ ನೆನಪಾಗಿ ಡೈಲಾಗ್ ಹೊಡೆದಿರಬೇಕು. ಆ ಮಾತುಗಳಿಗೆಲ್ಲಾ ನೀವು ಮಹತ್ವ ನೀಡಬೇಕಾಗಿಲ್ಲ'' ಎಂದು ಹೇಳಿದರು.
''ನಮ್ಮ ಕುಟುಂಬವಷ್ಟೇ ಅಧಿಕಾರಕ್ಕೆ ಬರಬೇಕು ಎಂಬುದು ಪಾಳೇಗಾರಿಕೆ ಪದ್ದತಿ. ಆದರೆ ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಪಾಳೇಗಾರಿಕೆ ಸಂಸ್ಕೃತಿಗೆ ಜನತಂತ್ರದಲ್ಲಿ ಯಾವುದೇ ಸ್ಥಾನವಿಲ್ಲ'' ಎಂದು ಸುಮಲತಾ ಅವರಿಗೆ ಟಾಂಗ್ ನೀಡಿದರು.
''ಯಲಿಯೂರಿನ ಜನರು ಅಂಡರ್ಪಾಸ್ ಬಗ್ಗೆ ಮನವಿ ಸಲ್ಲಿಸಿದ ಕಾರಣ ನಾನು ಸುಮತಲಾ ಅವರಿಗೆ ಎಲ್ಲೆಲ್ಲಿ ಅಂಡರ್ ಪಾಸ್, ಮೇಲ್ಸೇತುವೆ ಬೇಕು ಎಂಬ ಪ್ರಸ್ತಾವ ಕೊಡಿ ಎಂದು ಹೇಳಿದೆ ಅದರಲ್ಲಿ ತಪ್ಪೇನಿದೆ'' ಎಂದು ಪ್ರಶ್ನಿಸಿದರು.
''ಹಾಗೆಯೇ ನನಗೆ ಮತ ಹಾಕಲು ಯಾವ ಅಭಿಮಾನಿಗಳೂ ಇಲ್ಲ, ನಾನು ಸ್ಟಾರು ಅಲ್ಲ. ನಾನು ಮಾಡಿದ ಕಾರ್ಯವೇ ನನಗೆ ಶ್ರೀ ರಕ್ಷೆ'' ಎಂದು ಹೇಳಿದರು.