ನವದೆಹಲಿ, ನ. 12 (DaijiworldNews/MB) : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆಯನ್ನು ಘೋಷಿಸಿದರು.

ಈ ಯೋಜನೆಯ ಬಗ್ಗೆ ಮಾತನಾಡಿದ ಅವರು, ''ಈ ಯೋಜನೆಯು ಹೊಸ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ಈ ಯೋಜನೆಯು ಅಕ್ಟೋಬರ್ 1,2020ಕ್ಕೆ ಅನ್ವಯವಾಗುವಂತೆ ಜಾರಿಗೆ ಬರಲಿದೆ'' ಎಂದು ಹೇಳಿದರು.
''ಈ ಯೋಜನೆಯ ಸೌಲಭ್ಯವು ಮಾರ್ಚ್ನಿಂದ ಸೆಪ್ಟಂಬರ್ ಒಳಗೆ ಉದ್ಯೋಗ ಕಳೆದುಕೊಂಡವರಿಗೆ ದೊರೆಯಲಿದೆ'' ಎಂದು ತಿಳಿಸಿದರು.
''ದೇಶದಲ್ಲೀಗ ಕೊರೊನಾ ಪ್ರಕರಣಗಳು ಇಳಿಕೆ ಕಾಣುತ್ತಿದ್ದು ಈ ಹಿನ್ನೆಲೆಯಲ್ಲಿ ಆರ್ಥಿಕತೆಯು ಮತ್ತೆ ಚೇತರಿಕೆ ಕಾಣುತ್ತಿದೆ. ಅಕ್ಟೋಬರ್ನಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಬ್ಯಾಂಕ್ಗಳಿಗೆ ಸಾಲ ಮರು ಪಾವತಿಯೂ ಅಧಿಕವಾಗಿದೆ.ಹೂಡಿಕೆಯೂ ಅಧಿಕವಾಗುತ್ತಿದೆ'' ಎಂದು ಹೇಳಿದರು.
''ಆತ್ಮ ನಿರ್ಭರ ನಿಧಿ ಯೋಜನೆಯಡಿ ಸಾಲಕ್ಕಾಗಿ 26.62 ಲಕ್ಷ ಬೀದಿಬದಿ ವ್ಯಾಪಾರಿಗಳ ಅರ್ಜಿಗಳು ಬಂದಿದ್ದು ಈವರೆಗೆ ಈ ಯೋಜನೆಯಡಿಯಲ್ಲಿ ಒಟ್ಟು 1,373 ಕೋಟಿ ರೂ. ಸಾಲ ನೀಡಲಾಗಿದೆ'' ಎಂದು ಮಾಹಿತಿ ನೀಡಿದರು.
''ಜಿಡಿಪಿ ಏರಿಕೆಯಾಗುತ್ತಿರುವುದು ದೇಶದ ಆರ್ಥಿಕತೆ ಸುಧಾರಿಸುತ್ತಿದೆ ಎಂಬುದರ ಪ್ರತೀಕ ಎಂದು ಹೇಳಿದ ಅವರು, ಬ್ಯಾಂಕ್ಗಳ ಸಾಲ ನೀಡುವಿಕೆಯು ಶೇ.5.1 ಸುಧಾರಣೆ ಕಂಡಿದೆ. ವಿದ್ಯುತ್ ಬಳಕೆ ಶೇ.12 ರಷ್ಟು ಅಧಿಕವಾಗಿದೆ'' ಎಂದರು.
''ವಲಸೆ ಕಾರ್ಮಿಕರ ವಿಚಾರವಾಗಿ ಪೋರ್ಟಲ್ ಸಿದ್ದ ಪಡಿಸಲಾಗುತ್ತಿದ್ದು ಇದಕ್ಕಾಗಿ ರಾಜ್ಯ ಸರ್ಕಾರಗಳ ಸಹಕಾರ ಪಡೆಯುತ್ತೇವೆ'' ಎಂದು ಹೇಳಿದರು.
ಹಾಗೆಯೇ, ''ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯು ಯಶಸ್ವಿಯಾಗಿದೆ. ಸ್ವನಿಧಿ ಯೋಜನೆಯಡಿ 26.26 ಕೋಟಿ ರೂ. ಸಾಲ ನೀಡಲಾಗಿದೆ'' ಎಂದು ತಿಳಿಸಿದರು.