ಮುಂಬೈ, ನ. 12 (DaijiworldNews/MB) : 'ನನ್ನೊಂದಿಗೆ ಭಾರತದ ಜನರಿದ್ದಾರೆ, ಒಬ್ಬಂಟಿ ನೀವು ಉದ್ದವ್ ಠಾಕ್ರೆ' ಎಂದು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮಾಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ ವಿರುದ್ದ ಕಿಡಿಕಾರಿದ್ದಾರೆ.

ಒಂದು ವಾರ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಅರ್ನಬ್, ಬುಧವಾರ ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಗೊಂಡರು. ಬಳಿಕ ತಮ್ಮ ಟಿವಿ ಚಾನೆಲ್ ನ ನ್ಯೂಸ್ ರೂಂನಿಂದ ಮಾತನಾಡಿದ್ದಾರೆ.
''ಉದ್ದವ್ ಠಾಕ್ರೆ ಕೇಳಿಲ್ಲಿ, ನಿಮ್ಮಿಂದ ತಡೆಯಲಾದರೆ ನನ್ನನ್ನು ತಡೆಯಿರಿ. ಹಾಗೆಯೇ ನನ್ನನ್ನು ಜೈಲಿಗೆ ಹಾಕಿ ನಾನು ಜೈಲಿನಿಂದಲೂ ಸುದ್ದಿ ವಾಹಿನಿ ಆರಂಭಿಸುವೆ ನೀನು ಏನು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಾನು ಒಬ್ಬಂಟಿಯಲ್ಲ. ಏಕಾಂಗಿಯಾಗಿರುವುದು ನೀವು ಉದ್ದವ್ ಠಾಕ್ರೆ. ನನ್ನೊಂದಿಗೆ ನನ್ನ ತಂಡವಿದೆ. ಭಾರತದ ಜನರಿದ್ದಾರೆ'' ಎಂದು ಆಕ್ರೋಶಗೊಂಡಿದ್ದಾರೆ.
ಹಾಗೆಯೇ, ''ನಾನು ಕೆಲವು ತಿಂಗಳಲ್ಲೇ ರಿಪಬ್ಲಿಕ್ ಚಾನೆಲ್ ಅಂತರಾಷ್ಟ್ರೀಯ ಮಾಧ್ಯಮವನ್ನು ಆರಂಭಿಸದಿದ್ದರೆ ನನ್ನ ಹೆಸರನ್ನು ನಾನು ಬದಲಾಯಿಸುತ್ತೇನೆ'' ಎಂದು ಕೂಡಾ ಹೇಳಿದ್ದಾರೆ.
ಈ ಸಂದರ್ಭದಲ್ಲೇ ತನಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್ಗೆ ಅಬಾರಿಯಾಗಿದ್ದೇನೆ ಎಂದೂ ಮರಾಠಿ ಭಾಷೆಯಲ್ಲಿ ಹೇಳಿದ್ದಾರೆ.
2018ರಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಮುಂಬೈ ಪೊಲೀಸರು ಹಠಾತ್ತನೇ ದಾಳಿ ನಡೆಸಿ ಅರ್ನಬ್ನ್ನು ಬಂಧಿಸಿದ್ದರು.