ಬೆಂಗಳೂರು, ನ. 10 (DaijiworldNews/MB) : ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯುತ್ತಿದ್ದು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಹಾಗೆಯೇ ಮಂಗಳವಾರ ಬಿಹಾರ ವಿಧಾನಸಭಾ ಚುನಾವಣೆ, ಮಧ್ಯಪ್ರದೇಶದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಉಪಚುನಾವಣೆಗಳು ನಡೆಯುತ್ತಿದೆ. ಈ ಎಲ್ಲಾ ಕಡೆಗಳಲ್ಲೂ ಬಿಜೆಪಿ ನೇತೃತ್ವದ ಕೂಟ ಅಥವಾ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಕಾಲೆಳೆದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ''ಇವಿಎಂಗಳನ್ನು ಇಂದು ಮೊದಲು ದೂಷಿಸುವವರು ಯಾರು?'' ಎಂದು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಇಂದು ಇವಿಎಂಗಳನ್ನು ಮೊದಲು ದೂಷಿಸುವವರು ಯಾರು'' ಎಂದು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ನಡೆಯುತ್ತಿರುವ ಚುನಾವಣಾ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಸ್ತುತ ಬಿಜೆಪಿ, ಜೆಡಿಯು ನೇತೃತ್ವದ ಎನ್ಡಿಎ ಕೂಟ 128 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ-ಕಾಂಗ್ರೆಸ್ ಹಾಗೂ ಇತರ ಮೂರು ಪಕ್ಷಗಳನ್ನು ಒಳಗೊಂಡ ಮಹಾಘಟ ಬಂಧನ್ 104 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಆರಂಭದಲ್ಲಿ ಮುನ್ನಡೆಯಲ್ಲಿದ್ದ ಮಹಾಘಟ ಬಂಧನ್ನನ್ನು ಹಿಂದಕ್ಕೆ ತಳ್ಳಿದ ಎನ್ಡಿಎ ಕೂಟ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಕ್ಷೇತ್ರಗಳ ಗೆಲುವು ಅಗತ್ಯವಾಗಿದೆ.
ಮಧ್ಯಪ್ರದೇಶದಲ್ಲಿ 25 ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿಯು 18, ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ 7 ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ 5 ಕ್ಷೇತ್ರದಲ್ಲಿ, ಬಿಎಸ್ಪಿ 1, ಎಸ್ಪಿ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.