ಲಕ್ನೋ, ನ.07 (DaijiworldNews/PY): ದೀಪಾವಳಿ ಅಂಗವಾಗಿ ಅಯೋಧ್ಯೆಯ ಸರಯು ನದಿ ದಡದ 28 ಘಾಟ್ಗಳಲ್ಲಿ ನ.13ರಂದು 5.51 ಲಕ್ಷ ಹಣತೆಗಳನ್ನು ಬೆಳಗಿಸಲು ತಯಾರಿ ನಡೆಯುತ್ತಿದೆ.

ದೀಪೋತ್ಸವ ಕಾರ್ಯಕ್ರಮದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದು, ರಾಮಜನ್ಮಭೂಮಿಯಲ್ಲಿರುವ ರಾಮಲಲ್ಲಾಗೆ ನಮಸ್ಕರಿಸಿ, ರಾಮ್ ಕಿ ಪೈಡಿ ದೀಪಗಳನ್ನು ಬೆಳಗಲಿದ್ದಾರೆ.
ಈ ಬಗ್ಗೆ ನ.6ರ ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಸರಯು ನದಿ ದಡದ 28 ಘಾಟ್ಗಳಲ್ಲಿ ನ.13ರಂದು 5.51 ಲಕ್ಷ ಹಣತೆಗಳನ್ನು ಬೆಳಗಲಾಗುತ್ತಿದ್ದು, ಅಯೋಧ್ಯೆಯ ಸಂಭ್ರವನ್ನು ಮತ್ತಷ್ಟು ಹೆಚ್ಚಿಸಲು ಕರೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಯೋಧ್ಯೆಯ ಅಧಿಕಾರಿ, ಈ ದೀಪೋತ್ಸವಕ್ಕೆ ಹೊರಗಿನಿಂದ ಬರುವವರಿಗೆ ಅವಕಾಶವಿಲ್ಲ. ಜನರು ತಮ್ಮ ಮನೆಗಳಿಂದ ದೀಪಗಳನ್ನು ತಂದು ದೀಪ ಬೆಳಗಿಸಬೇಕು. ಈ ದೀಪೋತ್ಸವ ನಾಲ್ಕು ದಿನಗಳ ಕಾಲ ನಡೆಯಲಿದೆ. ದೀಪೋತ್ಸವ ಮಾತ್ರವಲ್ಲದೇ, ಕಾರ್ತಿಕ ಕುಂಭ ಮೇಳ ಸೇರಿದಂತೆ ಪಂಚ ಕೋಶಿ ಹಾಗೂ 14 ಕೋಶಿ ಪರಿಕ್ರಮಗಳಂತಹ ಇತರ ಆಕರ್ಷಣೆಯ ಆಚರಣೆಗಳ ಸಮಯದಲ್ಲಿ ಕೂಡಾ ಹೊರಗಿನವರಿಗೆ ಅವಕಾಶ ಇಲ್ಲ ಎಂದಿದ್ದಾರೆ.
ಅಯೋಧ್ಯೆಯ ವಿಭಾಗೀಯ ಆಯುಕ್ತ ಎಂ.ಪಿ.ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಅಯೋಧ್ಯೆಯ ಗಡಿಯು ನ.11ರಿಂದಲೇ ಬಂದ್ ಆಗಲಿದೆ. ಸ್ಥಳೀಯರು ಮಾತ್ರವೇ ಈ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ನ.12ರಂದು ಈ ದೀಪೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿದೆ.