ಗುಜರಾತ್,ಅ. 31 (DaijiworldNews/HR): ಸಾರ್ವಜನಿಕರು ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಫಲಾನುಭವಿಗಳು ಮಾತ್ರವಲ್ಲದೆ ಅವರೇ ನಿಜವಾದ ಪ್ರೇರಕ ಶಕ್ತಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಸಿವಿಲ್ ಸರ್ವಿಸ್ ಪ್ರೊಬೆಷನರಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

ಈ ಕುರಿತು ನಾಗರಿಕ ಸೇವಾ ಪ್ರೊಬೆಷನರಿಗಳನ್ನುದ್ದೇಶಿಸಿ ವರ್ಚುವಲ್ ಸಂವಾದ ನಡೆಸಿ ಮಾತನಾಡಿದ ಅವರು, ''ಸಾರ್ವಜನಿಕರು ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಫಲಾನುಭವಿಗಳು ಮಾತ್ರವಲ್ಲದೆ ಅವರೇ ನಿಜವಾದ ಪ್ರೇರಕ ಶಕ್ತಿಗಳು. ಹಾಗಾಗಿ ನಾವು ಸರ್ಕಾರದಿಂದ ಆಡಳಿತದ ಕಡೆಗೆ ಮುನ್ನಡೆಯಬೇಕು'' ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಮಾತುಗಳನ್ನು ನೆನಪು ಮಾಡಿಕೊಂಡ ಮೋದಿ, ದೇಶದ ನಾಗರಿಕ ಸೇವೆಗಳಿಗೆ ಸರ್ದಾರ್ ಪಟೇಲರು ಪಿತಾಮಹ ಎಂದರೆ ತಪ್ಪಾಗಲಾರದು. ಏಪ್ರಿಲ್ 21, 1947ರಲ್ಲಿ ಮೊದಲ ಬ್ಯಾಚ್ ನ ಆಡಳಿತಾತ್ಮಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ವಲ್ಲಭಬಾಯಿ, ನಾಗರಿಕ ಸೇವೆಯಲ್ಲಿರುವವರನ್ನು ದೇಶದ ಸ್ಟೀಲ್ ಫ್ರೇಮ್ ಗಳೆಂದು ಕರೆದಿದ್ದರು ಎಂಬುದಾಗಿ ಮೋದಿ ಹೇಳಿದ್ದಾರೆ.