ನವದೆಹಲಿ, ಜೂ 19 (Daijiworld News/MSP): ರಾಷ್ಟ್ರ ರಾಜಧಾನಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಕೊರೊನಾದಿಂದ ಬಳಲುತ್ತಿದ್ದು ಅವರ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿರುವ ಹಿನ್ನಲೆಯಲ್ಲಿ ಫ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.

ಸತ್ಯೇಂದರ್ ಜೈನ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿತ್ತು. ಮಾರನೇ ದಿನ ಅವರಿಗೆ ತೀವ್ರವಾದ ಜ್ವರ ಹಾಗೂ ಉಸಿರಾಟದಲ್ಲಿ ತೊಂದರೆ ಉಂಟಾಗಿದ್ದು, ರಾಜೀವ್ ಗಾಂಧಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಸಾಕೇತ್ ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಫ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್-19 ನೊಂದಿಗೆ ನ್ಯೂಮೊನಿಯಾದಿಂದಲೂ ಬಳಲುತ್ತಿರುವ ಸತ್ಯೇಂದರ್ ಐಸಿಯುಗೆ ಸ್ಥಳಾಂತರಿಸಲಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ. 55 ವರ್ಷದ ಸತ್ಯೇಂದರ್ ಜೈನ್ ಅವರ ಅಕ್ಸಿಜನ್ ಶುದ್ಧತ್ವ ಮಟ್ಟ 89ಕ್ಕೆ ಇಳಿದಿದ್ದು ಆಕ್ಸಿಜನ್ ಬೆಂಬಲದಲ್ಲಿಯೇ ಇರಿಸಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಕೊರೋನಾ ಪರಿಸ್ಥಿತಿ ಕುರಿತ ಉನ್ನತ ಅಧಿಕಾರಿಗಳ ಸಭೆಯಲ್ಲೂ ಸತ್ಯೇಂದರ್ ಜೈನ್ ಪಾಲ್ಗೊಂಡಿದ್ದರು