ಕೊಪ್ಪಳ, ಜೂ 03 (DaijiworldNews/PY) : 15 ವರ್ಷಗಳ ಹಿಂದೆ ಪತ್ನಿಯೇ ತನ್ನ ಪತಿಯನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಂಕರ್ ಸಿಂಗ್ ಎನ್ನಲಾಗಿದೆ. ಬಂಧಿತ ಆರೋಪಿಗಳನ್ನು ಗಂಗಾವತಿಯ ವಿರುಪಾಪೂರ ನಗರದ ಮೃತನ ಪತ್ನಿ ಲಕ್ಷ್ಮೀಸಿಂಗ್, ಬಾಬಾ ಜಾಕೀರಬಾಷಾ, ರಾಂಪೂರ ಪೇಟೆಯ ಅಮ್ಜದ್ಖಾನ್, ಕಿಲ್ಲಾ ಏರಿಯಾದ ಅಬ್ದುಲ್ ಹಫೀಜ್ ಹಾಗೂ ಈಳಿಗನೂರ ಗ್ರಾಮದ ಶಿವನಗೌಡ ಎಂದು ಗುರುತಿಸಲಾಗಿದೆ. ಮೃತನ ಮಗಳು ತನ್ನ ತಂದೆಯ ಕೊಲೆಯ ರಹಸ್ಯವನ್ನು ಬಹಿರಂಗಪಡಿಸಿದ್ದಾಳೆ.
ಹಲವಾರು ವರ್ಷಗಳ ಹಿಂದೆಯೇ ಮೃತ ಶಂಕರ್ ಸಿಂಗ್ನನ್ನು ಆರೋಪಿ ಲಕ್ಷ್ಮೀ ಸಿಂಗ್ ವಿವಾಹವಾಗಿದ್ದಳು. ಆದರೆ, ವಿವಾಹದ ನಂತರ ಲಕ್ಷ್ಮೀ ಅಮ್ಜದ್ಖಾನ್, ಅಬ್ದುಲ್ ಹಫೀಜ್ ಮತ್ತು ಬಾಬಾ ಜಾಕೀರಬಾಷಾ ಇವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ಲಕ್ಷ್ಮೀ ಸಿಂಗ್ ಪತಿಗೆ ಗೊತ್ತಾಗಿ ಆತ ಪತ್ನಿಗೆ ಹೊಡೆದು ಎಚ್ಚರಿಕೆ ನೀಡಿದ್ದಾನೆ. ಈ ಕಾರಣದಿಂದ ಕೋಪಗೊಂಡಿದ್ದ ಆಕೆ ಪತಿಯನ್ನು ಹತ್ಯೆ ಮಾಡಲು ತೀರ್ಮಾನಿಸಿದ್ದು, 2005ರಲ್ಲಿ ಆಗಸ್ಟ್ ತಿಂಗಳ ಒಂದು ದಿನ ಶಂಕರ್ಸಿಂಗ್ಗೆ ಚಹಾದಲ್ಲಿ ನಿದ್ದೆ ಮಾತ್ರೆ ಹಾಕಿಕೊಟ್ಟು ಮಲಗಿಸಿದ್ದಾಳೆ. ಆ ಸಂದರ್ಭ ಆರೋಪಿಗಳು ಆತನ ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಬಳಿಕ ಆತನ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಸಮಾಧಿ ಮಾಡಿಸಿದ್ದಾಳೆ.
ಹತ್ಯೆ ಮಾಡಿದ ಬಳಿಕ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ದೇಹವನ್ನು ಮುಚ್ಚಿ ಆ ಖಾಲಿ ನಿವೇಶನವನ್ನು 2015ರಲ್ಲಿ ಈಳಿಗನೂರ ಗ್ರಾಮದ ಶಿವನಗೌಡನಿಗೆ ಲಕ್ಷ್ಮೀಸಿಂಗ್ ಮಾರಾಟ ಮಾಡಿದ್ದಾಳೆ. ಬಳಿಕ ಶಿವನಗೌಡ ಮನೆ ಕಟ್ಟಿಸುತ್ತಿರುವ ಸಂದರ್ಭ ಶವದ ಮೂಳೆಗಳು ಪತ್ತೆಯಾಗಿದ್ದು, ಮೂಳೆಗಳು ಸೇರಿದಂತೆ ಬಟ್ಟೆ ಹಾಗೂ ದೇಹದ ಮೇಲಿದ್ದ ಇತರ ವಸ್ತುಗಳಿಂದ ಮಕ್ಕಳು ನಮ್ಮ ತಂದೆ ಎಂದು ಗುರುತಿಸಿದ್ದಾರೆ. ಈ ಬಗ್ಗೆ ಮಗಳು ತನ್ನ ತಾಯಿಯನ್ನು ವಿಚಾರಿಸಿದಾಗ ಅಮ್ಜದ್ಖಾನ್, ಅಬ್ದುಲ್ ಹಫೀಜ್ ಹಾಗೂ ಬಾಬಾ ಜಾಕೀರಬಾಷಾ ಸೇರಿ ಹತ್ಯೆ ಮಾಡಿ ತಾನೇ ಸಮಾಧಿ ಮಾಡಿರುವುದಾಗಿ ಹೇಳಿದ್ದಾಳೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಹತ್ಯೆ ಮಾಡುವುದಾಗಿ ಮಗಳಿಗೆ ಆಕೆ ಬೆದರಿಕೆ ಹಾಕಿದ್ದಾಳೆ. ಮರು ದಿವಸ ಶವದ ಮೂಳೆಗಳನ್ನು ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಿದ್ದು, ಮಗಳ ಮೊಬೈಲ್ ಫೋನ್ನಲ್ಲಿದ್ದ ಅಸ್ಥಿಪಂಜರದ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾಳೆ.
ಐದು ವರ್ಷಗಳ ನಂತರ ಮೃತನ ಮಗಳಿಗೆ ಹಾಗೂ ಆರೋಪಿ ಲಕ್ಷ್ಮೀ ಸಿಂಗ್ಗೆ ಜಗಳ ನಡೆದಿದ್ದು, ಆರೋಪಿ ಲಕ್ಷ್ಮೀ ಸಿಂಗ್ ಅನಾಚ್ಯ ಶಬ್ದದಿಂದ ಬೈದು , ಹೊಡೆದು, ನಿಮ್ಮ ಅಪ್ಪನಿಗೆ ಮಾಡಿದಂತೆ ನಿನಗೂ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಇದರಿಂದ ಭಯಗೊಂಡ ಮಗಳು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಆರೋಪಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾಳೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ, ನಾಲ್ವರು ಹತ್ಯೆ ಮಾಡಿರುವ ಆರೋಪಿಗಳನ್ನು ಹಾಗೂ ಶವದ ಮೂಳೆಗಳನ್ನು ಸುಟ್ಟು ಹಾಕಿ ಸಾಕ್ಷಿ ನಾಶ ಪಡಿಸಿದ್ದ ಶಿವನಗೌಡನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿ.ಸಂಗೀತಾ ತಿಳಿಸಿದ್ದಾರೆ.