ಮುಂಬೈ, ಮೇ 28 (Daijiworld News/MB) : ನನ್ನ ಅಜಾಗರೂಕತೆಯಿಂದಲ್ಲೇ ನನಗೆ ಸೋಂಕು ತಗುಲಿತು ಎಂದು ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವದ್ ತಮ್ಮನ್ನು ತಾವು ಧೂಷಿಸಿಕೊಂಡಿದ್ದಾರೆ.

ಸೋಂಕು ತಗುಲಿ ಬಳಿಕ ಮೇ ತಿಂಗಳ ಹಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬುಧವಾರ ಆನ್ಲೈನ್ ಸಮಾಲೋಚನೆಯೊಂದರಲ್ಲಿ, ನನ್ನ ಅಜಾಗರೂಕತೆಯಿಂದಲ್ಲೇ ನನಗೆ ಸೋಂಕು ತಗುಲಿತು. ಜನರ ಸಲಹೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣದಿಂದಾಗಿ ನನಗೆ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.
ನನ್ನನ್ನು ಎರಡು ದಿನಗಳವರೆಗೆ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ನನ್ನ ಮನೋಬಲದ ಕಾರಣದಿಂದಾಗಿ ಕೊರೊನಾದಿಂದ ಪಾರಾಗಿ ಬಂದಿದ್ದು ಕೊನೆಯ ಎರಡು ವಾರಗಳಲ್ಲಿ ಅತೀ ವೇಗವಾಗಿ ಚೇತರಿಸಿಕೊಂಡೆ. ನನ್ನ ಹಿಮೋಗ್ಲೋಬಿನ್ ಮಟ್ಟವು ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಈಗ ಏರಿಕೆಯಾಗಿದೆ. ಹಾಗೆಯೇ ಆಹಾರದ ವಿಚಾರದಲ್ಲೂ ಬಹಳ ಎಚ್ಚರವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಅವದ್ ಥಾಣೆಯ ಉಸ್ತುವಾರಿ ಸಚಿವರೂ ಆಗಿದ್ದು, ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿದ್ದ ಆರಂಭದ ದಿನಗಳಲ್ಲಿ ಜನರಿಗೆ ಪರಿಹಾರ ಒದಗಿಸುವ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.