ಬೆಂಗಳೂರು, ಸೆ.19 (DaijiworldNews/AK): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರಾವಳಿಯ ಅಭಿವೃದ್ಧಿಗೆ ರೂ. 32,611 ಕೋಟಿ ಘೋಷಣೆ ಮಾಡಿದ್ದಾರೆ. ಬಜೆಟ್ನಲ್ಲಿ ಹಂಚಿಕೆ ಇಲ್ಲದೆ ಆ ಹಣವನ್ನು ಎಲ್ಲಿಂದ ತರುತ್ತಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿಗಳು, ಕರಾವಳಿ ಜಿಲ್ಲೆಗಳಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಹಣ ಘೋಷಣೆ ಮಾಡಿದ್ದಾರೆ. ಇದನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ ಆ ಕಾಮಗಾರಿಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರು.
32,611 ಕೋಟಿಯಲ್ಲಿ 15 ಸಾವಿರ ಕೋಟಿ ರಸ್ತೆಗಳ ಅಭಿವೃದ್ಧಿಗೆ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಕಾರವಾರದಲ್ಲಿ ಬಂದರು ಅಭಿವೃದ್ಧಿ, ಮೀನುಗಾರಿಕೆ ವಿಶ್ವವಿದ್ಯಾಲಯ ಘೋಷಣೆ ಮಾಡಿದ್ದಾರೆ. ಕರಾವಳಿ ಕರ್ನಾಟಕವನ್ನು ಪ್ರವಾಸೋದ್ಯಮದ ದೊಡ್ಡ ಕೇಂದ್ರ ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಇದಕ್ಕೆಲ್ಲ ಹಣ ಬೇಕಲ್ಲವೇ ಎಂದು ಪ್ರಶ್ನಿಸಿದರು.