ಅಗರ್ ಮಾಲ್ವಾ, ಸೆ.19 (DaijiworldNews/AA): ಭಾರಿ ಮಳೆಗೆ ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಕಾರು ಉರುಳಿಬಿದ್ದು, ಅದರಲ್ಲಿದ್ದ 8 ಮಂದಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

ನಲ್ಖೇಡಾದ ಪ್ರಸಿದ್ಧ ತಾಯಿ ಬಗಲಾಮುಖಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಭಕ್ತರು ಆಗಮಿಸಿದ್ದರು. ರಾತ್ರಿಭಾರಿ ಮಳೆಯಾಗಿದ್ದು, ಇದರಿಂದ ದೇವಸ್ಥಾನದ ಸಮೀಪದ ಕಾಲುವೆಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾಗಿದೆ. ಈ ವೇಳೆ ಕಾಲುವೆಯ ಸಮೀಪ ಸಾಗುತ್ತಿದ್ದ ಕಾರು ನೀರಿನ ಸೆಳೆತಕ್ಕೆ ಸಿಲುಕಿ ಕಾಲುವೆಗೆ ಉರುಳಿದ್ದು ಕೊಚ್ಚಿಹೋಗಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯಾಡಳಿತ ಮತ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ನೀರಿನ ರಭಸ ಹೆಚ್ಚಾಗಿದ್ದ ಕಾರಣ ರಕ್ಷಣಾ ಕಾರ್ಯಕ್ಕೆ ಅಡಚಣೆಯುಂಟಾಗಿದೆ.
ಈ ದುರ್ಘಟನೆಯಲ್ಲಿ 3 ಮಕ್ಕಳು, 2 ಮಹಿಳೆಯರು ಹಾಗೂ 3 ಪುರುಷರು ಸೇರಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ನಲ್ಖೇಡಾದಲ್ಲಿ ದೇವರ ದರ್ಶನಕ್ಕಾಗಿ ಬಂದಿದ್ದರು. ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಿದ್ದಾರೆ.