ಬೆಂಗಳೂರು, ಸೆ.10 (DaijiworldNews/AA): ದೇಶದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಜಾಗತಿಕ ಮಾರುಕಟ್ಟೆಗೆ ಸರಿಹೊಂದುವ ರಫ್ತು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬೇಕು ಎಂದು ಕೇಂದ್ರ ಎಂಎಸ್ಎಂಇ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ 156 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ 'ಎಂಎಸ್ಎಂಇ ಟೆಕ್ನಾಲಜಿ ಸೆಂಟರ್' ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಕೃಷಿ ಕ್ಷೇತ್ರದ ನಂತರ ಎಂಎಸ್ಎಂಇ ವಲಯದಲ್ಲಿ ಅತ್ಯಧಿಕ ಎಂದರೆ 42 ಕೋಟಿ ಉದ್ಯೋಗಾವಕಾಶಗಳಿವೆ. ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ಯುವಜನರಿಗೆ ಕೌಶಲ್ಯಯುಕ್ತ ಶಿಕ್ಷಣ ಹಾಗೂ ತರಬೇತಿ ನೀಡಿ ಉದ್ಯೋಗಕ್ಕೆ ಸಜ್ಜುಗೊಳಿಸಲು ಕೇಂದ್ರ ಸರ್ಕಾರವು ಈ ತಾಂತ್ರಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದು ಹೇಳಿದರು.
"ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ, ದೇಶದಲ್ಲೇ ತಾಂತ್ರಿಕಾಧಾರಿತ ಉತ್ಪನ್ನಗಳನ್ನು ತಯಾರಿಸಬೇಕಿದೆ. ಇಂದು ಬೆಂಗಳೂರು ಪ್ರಮುಖ ಏರೋಸ್ಪೇಸ್ ಹಬ್ ಆಗಿ ಹೊರಹೊಮ್ಮಿದೆ. ಆಟಿಕೆಗಳಿಂದ ಹಿಡಿದು ಚಂದ್ರಯಾನದವರೆಗೆ ಬೇಕಾಗುವ ಎಲ್ಲಾ ಉತ್ಪನ್ನಗಳೂ ಇಲ್ಲೇ ತಯಾರಾಗಬೇಕಿದ್ದು, ಅದಕ್ಕೆ ಅಗತ್ಯ ತರಬೇತಿಯನ್ನು ಎಂಎಸ್ಎಂಇ ನೀಡುತ್ತಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲೂ ರೋಬೋಟಿಕ್ಸ್ ಮತ್ತು ಎಐ ತಾಂತ್ರಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ತಿಳಿಸಿದರು.