ಬೆಂಗಳೂರು, ಸೆ. 10 (DaijiworldNews/AK):ವಂದೇ ಮಾತರಂ ಗೀತೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಗೀತೆಯನ್ನು ಎರಡೇ ಚರಣ ಹಾಡಲು ಆದೇಶ ಹೊರಡಿಸಿದೆ.

ವಂದೇ ಮಾತರಂ ಆರು ಚರಣ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಎರಡು ಚರಣ ಮಾತ್ರ ಹಾಡಲು ಆದೇಶಿಸಿದೆ. ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಎರಡೇ ಚರಣ ಹಾಡಲು ಆದೇಶಿಸಿದೆ.
ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ದೇಶದ ಜನರಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ ‘ವಂದೇ ಮಾತರಂ’ ಗೀತೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ.
ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ತೀರ್ಮಾನದಂತೆ ರಾಜ್ಯದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ ವಾದನ/ಗಾಯನಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸರ್ಕಾರ ಆದೇಶಿಸಿದೆ.