National
100 ದಿನ ಪೂರೈಸಿದ ಡಿಕೆಶಿ ಸರ್ಕಾರ - ಮುಂದಿನ 500 ದಿನಗಳ ‘ಮಾಸ್ಟರ್ಪ್ಲ್ಯಾನ್’ ಏನು?
- Wed, Sep 09 2026 10:49:49 AM
-
ಬೆಂಗಳೂರು, ಸೆ. 09 (DaijiworldNews/TA): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೆಪ್ಟೆಂಬರ್ 10ರಂದು ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಐದು ಪ್ರಮುಖ ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳೊಂದಿಗೆ ಸಿಎಂ ಬೃಹತ್ ಟೌನ್ಹಾಲ್ ಸಂವಾದ ನಡೆಸಲಿದ್ದಾರೆ.

ಈ ವೇಳೆ ಸರ್ಕಾರದ 100 ದಿನಗಳ ಸಾಧನೆಗಳನ್ನು ಜನರ ಮುಂದಿಡುವುದರ ಜತೆಗೆ, ಮುಂದಿನ 500 ದಿನಗಳ ಅಭಿವೃದ್ಧಿಯ ದೃಷ್ಟಿಕೋನವನ್ನೂ ಮುಖ್ಯಮಂತ್ರಿ ಹಂಚಿಕೊಳ್ಳಲಿದ್ದಾರೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಆಡಳಿತಕ್ಕೆ ವೇಗ ನೀಡಲು ಒತ್ತು ನೀಡಿರುವ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ಅವಧಿಯಲ್ಲಿ ಜಾರಿಯಾದ ಐದು ಗ್ಯಾರಂಟಿ ಯೋಜನೆಗಳ ಮುಂದುವರಿಕೆಯ ಜೊತೆಗೆ ಮೂಲಸೌಕರ್ಯ, ಉದ್ಯೋಗ, ಕೃಷಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೂ ಆದ್ಯತೆ ನೀಡಿದ್ದಾರೆ.
‘ಪ್ರಜಾ ಸೇವಾ ಇಲಾಖೆ’ : ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ವಿಳಂಬ ಧೋರಣೆಗೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ಉದ್ದೇಶದಿಂದ ‘ಪ್ರಜಾ ಸೇವಾ ಇಲಾಖೆ’ ಆರಂಭಿಸಲಾಗಿದೆ. ಸಾರ್ವಜನಿಕರಿಂದ ಸ್ವೀಕರಿಸುವ ಕುಂದುಕೊರತೆ ಅರ್ಜಿಗಳನ್ನು ಕೇವಲ ಕಡತ ವಿಲೇವಾರಿ ಮಾಡಿದ ಆಧಾರದ ಮೇಲೆ ಅಲ್ಲದೆ, ಸಮಸ್ಯೆ ನಿಜವಾಗಿಯೂ ಪರಿಹಾರವಾಗಿದೆಯೇ ಎಂಬುದನ್ನು ಪರಿಗಣಿಸಿ ಮೌಲ್ಯಮಾಪನ ಮಾಡುವ ವ್ಯವಸ್ಥೆಗೆ ಒತ್ತು ನೀಡಲಾಗಿದೆ.
ಯುವಕರ ಸಬಲೀಕರಣಕ್ಕೆ ‘ಭಾರತ್ ಜೋಡೋ ಯುವ ಸಂಘ’ : ಯುವ ಸಬಲೀಕರಣದ ಭಾಗವಾಗಿ ರಾಜ್ಯ ಸರ್ಕಾರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ರಚಿಸುವ ಯೋಜನೆಗೆ ಚಾಲನೆ ನೀಡಿದೆ. 2027ರ ಮಾರ್ಚ್ 31ರೊಳಗೆ ಗ್ರಾಮೀಣ ಪ್ರದೇಶದ ಗ್ರಾಮ ಪಂಚಾಯತಿಗಳಲ್ಲಿ 6 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ 4 ಸಾವಿರ ಸೇರಿದಂತೆ ಒಟ್ಟು 10 ಸಾವಿರ ಯುವ ಸಂಘಗಳನ್ನು ರಚಿಸುವ ಗುರಿ ಹೊಂದಲಾಗಿದೆ. ಆಗಸ್ಟ್ 31ರವರೆಗೆ ಗ್ರಾಮೀಣ ಭಾಗದಲ್ಲಿ 6 ಲಕ್ಷದ ಗುರಿಯ ಪೈಕಿ 5,55,762 ಮಂದಿ ಹಾಗೂ ನಗರ ಪ್ರದೇಶದಲ್ಲಿ 4 ಲಕ್ಷದ ಗುರಿಯ ಪೈಕಿ 2.24 ಲಕ್ಷಕ್ಕೂ ಅಧಿಕ ಯುವಕರು ನೋಂದಾಯಿಸಿಕೊಂಡಿದ್ದಾರೆ.
ಸರ್ಕಾರದ 100 ದಿನಗಳ ಪ್ರಮುಖ ಹೆಜ್ಜೆಗಳು :
ಕಾವೇರಿ ವಿಚಾರದಲ್ಲಿ ಸರ್ವಪಕ್ಷ ಸಭೆ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಸರ್ವಪಕ್ಷ ಸಭೆ ನಡೆಸಿ, ಪ್ರತಿಪಕ್ಷಗಳ ಅಭಿಪ್ರಾಯ ಹಾಗೂ ಸಹಕಾರ ಪಡೆಯಲು ಸರ್ಕಾರ ಮುಂದಾಗಿದೆ.ಅತಿವೃಷ್ಟಿ–ಅನಾವೃಷ್ಟಿಗೆ ತಕ್ಷಣದ ಸ್ಪಂದನೆ : ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾದ ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಸ್ಥಿತಿಯನ್ನು ಪರಿಶೀಲಿಸಲು ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿದೆ.
ರೈತರು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದನೆ : ಪ್ರತಿಭಟನೆಯಲ್ಲಿ ತೊಡಗಿದ್ದ ಕೃಷಿ ಪದವೀಧರರ ಸಮಸ್ಯೆಗಳನ್ನು ಆಲಿಸುವುದು, ಕೃಷಿ ಅಧಿಕಾರಿ ನೇಮಕಾತಿಗೆ ಸಂಬಂಧಿಸಿದ ಗೊಂದಲ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದು ಹಾಗೂ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಪರೀಕ್ಷೆಗಳನ್ನು ಮುಂದೂಡುವಂತಹ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.
ಸರ್ಕಾರಿ ನೌಕರರೊಂದಿಗೆ ನೇರ ಸಂವಾದ : ರಾಜ್ಯದ ಸರ್ಕಾರಿ ನೌಕರರೊಂದಿಗೆ ಸಂವಾದ ನಡೆಸಿ ಬರ ನಿರ್ವಹಣೆ ಹಾಗೂ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರ ಪಡೆಯಲಾಗಿದೆ.
‘ಟೀಮ್ ಕರ್ನಾಟಕ’ಕ್ಕೆ ಕರೆ : ವಿಪಕ್ಷಗಳಿಗೂ ‘ಟೀಮ್ ಕರ್ನಾಟಕ’ದ ಭಾಗವಾಗಿ ಕೆಲಸ ಮಾಡುವಂತೆ ಸಿಎಂ ಕರೆ ನೀಡಿದ್ದಾರೆ. “224 ಶಾಸಕರೂ ನನಗೆ ಒಂದೇ. ಸದನದ ಹೊರಗೆ ರಾಜಕೀಯ ಮಾಡೋಣ; ಸದನದ ಒಳಗೆ ಒಟ್ಟಾಗಿ ಜನರಿಗಾಗಿ ಕೆಲಸ ಮಾಡೋಣ” ಎಂದು ಅವರು ಹೇಳಿದ್ದಾರೆ. ಅಧಿಕಾರವನ್ನು ಯಾರ ವಿರುದ್ಧವೂ ಬಳಸದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುವ ರೀತಿಯಲ್ಲಿ ಆಡಳಿತ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
2047ರೊಳಗೆ ರೂ. 3 ಟ್ರಿಲಿಯನ್ ಆರ್ಥಿಕತೆಯ ಗುರಿ : ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಭವಿಷ್ಯದ ಅಭಿವೃದ್ಧಿ ಕುರಿತು ಮಾತನಾಡಿದ್ದ ಸಿಎಂ, 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್ಗೆ ಏರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಮುಂದಿಟ್ಟಿದ್ದಾರೆ.
ಕೃಷಿಯಲ್ಲಿ ತಂತ್ರಜ್ಞಾನಕ್ಕೆ ಒತ್ತು : ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆಯಡಿ ಡ್ರೋನ್ ಹಾಗೂ ಉಪಗ್ರಹ ತಂತ್ರಜ್ಞಾನ ಬಳಸಿ ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ನೈಜ ಸಮಯದ ಮಾಹಿತಿ ಒದಗಿಸುವ ಗುರಿ ಹೊಂದಲಾಗಿದೆ. ಅದೇ ರೀತಿ, 3 ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ 50% ಸಹಾಯಧನ ಒದಗಿಸುವ ‘ರೈತ ಮಿತ್ರ’ ಕಾರ್ಯಕ್ರಮಕ್ಕೂ ಒತ್ತು ನೀಡಲಾಗಿದೆ.
ಉದ್ಯೋಗ ಸೃಷ್ಟಿಗೆ ರೂ. 2,500 ಪ್ರೋತ್ಸಾಹಧನ : ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ದಡಿ ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ‘ಉದ್ಯೋಗ ನಿಧಿ’ ಮೂಲಕ ಪ್ರೋತ್ಸಾಹ ನೀಡುವ ಯೋಜನೆ ರೂಪಿಸಲಾಗಿದೆ. ಹೊಸ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರತಿ ಉದ್ಯೋಗಕ್ಕೆ ತಿಂಗಳಿಗೆ ರೂ. 2,500 ಪ್ರೋತ್ಸಾಹಧನ ನೀಡುವ ಪ್ರಸ್ತಾವನೆಯೂ ಇದೆ. ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಸರ್ಕಾರ ಹೊಂದಿದೆ. ದೊಡ್ಡಬಳ್ಳಾಪುರದಲ್ಲಿ ರೂ. 20 ಸಾವಿರ ಕೋಟಿ ಹೂಡಿಕೆಯಲ್ಲಿ ‘ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್’ ಸ್ಥಾಪಿಸಿ ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆಯನ್ನೂ ಸರ್ಕಾರ ಮುಂದಿಟ್ಟಿದೆ.
ಶಿಕ್ಷಣ, ಮೀಸಲಾತಿಗೂ ಹೊಸ ಆದ್ಯತೆ : ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳಲ್ಲಿ 7.5% ಮೀಸಲಾತಿ ಕಲ್ಪಿಸುವ ‘ಸಹಾಯ ಹಸ್ತ’ ಯೋಜನೆಗೆ ಒತ್ತು ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರತಿಯೊಂದು ಪಟ್ಟಣ ಮತ್ತು ನಗರಗಳಲ್ಲಿ ರಿಂಗ್ ರಸ್ತೆ ಹಾಗೂ ‘ಮೊಬಿಲಿಟಿ ಗ್ರಿಡ್’ ಅಭಿವೃದ್ಧಿಪಡಿಸುವ ಉದ್ದೇಶವನ್ನೂ ಸರ್ಕಾರ ಹೊಂದಿದೆ.
ಕರ್ನಾಟಕದಲ್ಲಿ AI ಶಿಕ್ಷಣಕ್ಕೆ ಹೊಸ ಹೆಜ್ಜೆ : ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಕರ್ನಾಟಕವನ್ನು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಜಾಗತಿಕ AI ಸಂಸ್ಥೆ ಆಂಥ್ರೋಪಿಕ್ ಜೊತೆ ಕರ್ನಾಟಕ ಸರ್ಕಾರ ಸಹಭಾಗಿತ್ವಕ್ಕೆ ಮುಂದಾಗಿದ್ದು, ಆಡಳಿತ ಕೌಶಲ್ಯಾಭಿವೃದ್ಧಿ ಮತ್ತು ಡೀಪ್ಟೆಕ್ ಕ್ಷೇತ್ರದ ಬೆಳವಣಿಗೆಗೆ ಇದನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿದೆ. 6ನೇ ತರಗತಿಯಿಂದಲೇ ಶಾಲೆಗಳಲ್ಲಿ AI ಶಿಕ್ಷಣ ಪರಿಚಯಿಸುವ ಯೋಜನೆ, ‘AI ಅಕ್ಷರ ಅಭಿಯಾನ’ ಹಾಗೂ ‘ಕೋಡಿಂಗ್ ಗುರುಕುಲ’ದಂತಹ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ AI ಹಬ್ಗಳನ್ನು ಸ್ಥಾಪಿಸುವುದರ ಜತೆಗೆ, ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಗುರಿಯೂ ಇದೆ.
ಹಸಿರು ಬೆಂಗಳೂರು, ಸಾಮಾಜಿಕ ನ್ಯಾಯಕ್ಕೆ ಒತ್ತು : ಬೆಂಗಳೂರಿನಲ್ಲಿ ಹಸಿರು ವಲಯವನ್ನು ವಿಸ್ತರಿಸುವ ಉದ್ದೇಶದಿಂದ ಲಾಲ್ಬಾಗ್ ಮಾದರಿಯ ಮೂರು ಹೊಸ ಬೃಹತ್ ಉದ್ಯಾನವನಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಸಾಮಾಜಿಕ ನ್ಯಾಯದ ಉದ್ದೇಶದಿಂದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯಕ್ಕೆ ಹರಿದುಬರುವ CSR ನಿಧಿಯ ಸಮರ್ಪಕ ಬಳಕೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ IAS ಅಧಿಕಾರಿಯನ್ನು ನೇಮಕ ಮಾಡುವ ಕ್ರಮವೂ ಕೈಗೊಳ್ಳಲಾಗಿದೆ.
ಅಮೆರಿಕದೊಂದಿಗೆ ಸಂಬಂಧ ಬಲಪಡಿಸುವ ಪ್ರಯತ್ನ : ಅಮೆರಿಕದ ರಾಯಭಾರಿ ಸೆರ್ಗಿಯೋ ಗೊರ್ ಅವರೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದು, ಬೆಂಗಳೂರಿನಲ್ಲಿ ಅಮೆರಿಕದ ಶಾಶ್ವತ ರಾಯಭಾರಿ ಕಚೇರಿ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ಜಾಗತಿಕ ಹೂಡಿಕೆ ಹಾಗೂ ತಂತ್ರಜ್ಞಾನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಕ್ಕೆ ಸರ್ಕಾರ ಒತ್ತು ನೀಡುತ್ತಿದೆ.
ಬಿಡದಿ, ಮಾಲೂರು ಅಭಿವೃದ್ಧಿಗೂ ಗಮನ : ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದ ವಿವಾದಗಳು ಹಾಗೂ ಅಭಿಪ್ರಾಯಗಳನ್ನು ಪರಿಶೀಲಿಸಲು ನ್ಯಾ. ಗುಹನಾಥನ್ ನರೇಂದರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, 30 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದೇ ವೇಳೆ ಮಾಲೂರು ಕ್ಷೇತ್ರದಲ್ಲಿ ಸುಮಾರು ರೂ. 3,200 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಆಯೋಗ ರಚಿಸುವ ನಿರ್ಧಾರ ಕೈಗೊಂಡು, ಕೇವಲ ಮೂರು ದಿನಗಳಲ್ಲೇ ಅಧಿಕೃತ ಆದೇಶ ಹೊರಡಿಸಿರುವುದಾಗಿ ಸರ್ಕಾರ ತಿಳಿಸಿದೆ.
100 ದಿನಗಳ ಬಳಿಕ 500 ದಿನಗಳತ್ತ ಚಿತ್ತ : ಒಟ್ಟಿನಲ್ಲಿ, ಅಧಿಕಾರದ ಮೊದಲ 100 ದಿನಗಳಲ್ಲಿ ಆಡಳಿತಕ್ಕೆ ವೇಗ ನೀಡುವುದು, ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ, ಉದ್ಯೋಗ ಸೃಷ್ಟಿ, ಕೃಷಿಯಲ್ಲಿ ತಂತ್ರಜ್ಞಾನ, AI ಶಿಕ್ಷಣ, ನಗರ ಮೂಲಸೌಕರ್ಯ ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಇದೀಗ 100 ದಿನಗಳ ಸಾಧನೆಯ ಬಳಿಕ ಮುಂದಿನ 500 ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗೆ ಯಾವ ಹೊಸ ಹೆಜ್ಜೆಗಳನ್ನು ಇಡಲಿದೆ ಎಂಬುದರತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ.