ಹರಿಯಾಣ, ಸೆ. 09 (DaijiworldNews/AA): ಬಹುತೇಕ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗುವುದಿಲ್ಲ. ಸತತ ಸೋಲುಗಳ ಬಳಿಕ ಕೆಲವರಿಗೆ ಯಶಸ್ಸು ಲಭಿಸುತ್ತದೆ. ಹೀಗೆ ನಾಲ್ಕು ಪ್ರಯತ್ನಗಳ ಬಳಿಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗೀತಿಕಾ ಅರೋರಾ ಯಶೋಗಾಥೆ ಇದು.

ಹರಿಯಾಣದ ಬಲ್ಲಭಗಢದ ಗೀತಿಕಾ ಅರೋರಾ ಅವರು ಬಲ್ಲಭಗಢದ ರಾವಲ್ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ಬಳಿಕ ದೆಹಲಿ ವಿಶ್ವವಿದ್ಯಾಲಯದ ಇಂದ್ರಪ್ರಸ್ಥ ಕಾಲೇಜ್ ಫಾರ್ ವುಮೆನ್ನಲ್ಲಿ ಬಿಕಾಂ (ಆನರ್ಸ್) ಪದವಿ ಪಡೆದರು. 2021ರಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ 2023ರಲ್ಲಿ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿದರು.
2022ರಲ್ಲಿ ಮೊದಲ ಬಾರಿಗೆ ಗೀತಿಕಾ ಅವರು ಯುಪಿಎಸ್ಸಿ ಪರೀಕ್ಷೆ ಬರೆದರು. ತಮ್ಮ ಅತ್ಯುತ್ತಮ ಸಿದ್ಧತೆಯ ಪ್ರಯತ್ನ ಎಂದು ಪರಿಗಣಿಸಿದ್ದ ಈ ಪ್ರಯತ್ನದಲ್ಲಿ, ಪ್ರಿಲಿಮ್ಸ್ ಪರೀಕ್ಷೆಯ ಪೇಪರ್-1ರಲ್ಲಿ ಕೇವಲ ಎಂಟು ಅಂಕಗಳಿಂದ ಅನುತ್ತೀರ್ಣರಾದರು. ಆದರೆ ಸೋಲಿಗೆ ಕುಗ್ಗದೆ, ಮತ್ತಷ್ಟು ದೃಢ ಸಂಕಲ್ಪದೊಂದಿಗೆ ಮತ್ತೆ ತಯಾರಿ ಆರಂಭಿಸಿದರು.
ಬಳಿಕ 2022ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಗೀತಿಕಾ ಪ್ರಿಲಿಮ್ಸ್ ಹಾಗೂ ಮೇನ್ಸ್ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಕೇವಲ 12 ಅಂಕಗಳಿಂದ ಹಾಗೂ ಮೀಸಲು ಪಟ್ಟಿಯಲ್ಲಿ ಐದು ಅಂಕಗಳಿಂದ ಅವಕಾಶ ವಂಚಿತರಾಗುತ್ತಾರೆ. ಬಳಿಕ 2024ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಪ್ರಿಲಿಮ್ಸ್ನಲ್ಲೂ ಅವರು ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ.
ಆದರೆ ಕುಗ್ಗದೆ 2024ರಲ್ಲಿ ನಾಲ್ಕನೇ ಬಾರಿಗೆ ಗೀತಿಕಾ ಅವರು ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 22 ನೇ ಅಖಿಲ ಬಾರತ ರ್ಯಾಂಕ್ ಪಡೆದು ಉತ್ತೀಣ್ರಾಗುತ್ತಾರೆ. ಈ ಮೂಲಕ ಅನೇಕ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.