ಅಯೋಧ್ಯೆ, ಸೆ. 08 (DaijiworldNews/AA): ಉತ್ತರ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 8,000 ರೂ. ನಿಂದ 12,000 ರೂ.ಗೆ ಹೆಚ್ಚಿಸುವುದಾಗಿ ಹಾಗೂ ಸಹಾಯಕಿಯರ ಗೌರವಧನ 4,000 ರೂ. ನಿಂದ 6,000 ರೂ.ಗಳಿಗೆ ಹೆಚ್ಚಿಸುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಅಯೋಧ್ಯೆ ಪ್ರವಾಸದ ವೇಳೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಪರಿಷ್ಕೃತ ವೇತನ ವ್ಯವಸ್ಥೆಯಂತೆ ಉತ್ತರ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನವು 8,000 ರೂ. ನಿಂದ 12,000 ರೂ.ಗೆ ಹೆಚ್ಚಳವಾಗಲಿದೆ. ಅದೇ ರೀತಿ ಅಂಗನವಾಡಿ ಸಹಾಯಕಿಯರ ಗೌರವಧನ 4,000 ರೂ. ನಿಂದ 6,000 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಿದೆ" ಎಂದು ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 5 ಲಕ್ಷ ರೂ.ವರೆಗೆ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ಪ್ರಕಟಿಸಿದ ಅವರು, ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸೀರೆ ವಿತರಣೆ ಮಾಡಿದರು. ಜೊತೆಗೆ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಿದರು.