ಬೆಂಗಳೂರು,ಸೆ. 08 (DaijiworldNews/AK): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಯ ಕಾರ್ಯ ಭರದಿಂದ ಸಾಗಿದೆ. ಅನರ್ಹ ಫಲಾನುಭವಿಗಳನ್ನು ಹೊರಗಿಡುವ ಉದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಶೇ.72ರಷ್ಟು ಫಲಾನುಭವಿಗಳು ಪರಿಷ್ಕರಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ಅಥವಾ ಮರು ಪರಿಶೀಲನೆಗಾಗಿ ನಿಮ್ಮ ಮನೆಗೆ ಬರುವ ಎಸ್ಕಾಂ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಮೊಬೈಲ್ ಆಪ್ ಮೂಲಕ ವಿವರಗಳನ್ನು ನವೀಕರಿಸಬೇಕು. ಒಂದು ವೇಳೆ ಅವರು ಬಂದಾಗ ನೀವು ಲಭ್ಯವಿಲ್ಲದಿದ್ದಲ್ಲಿ ನಿಮ್ಮ ವ್ಯಾಪ್ತಿಯ ಕಚೇರಿಗೆ ಭೇಟಿ ನೀಡಿ ನವೀಕರಣ ಅರ್ಜಿ ಪಡೆದು, ಅಗತ್ಯ ದಾಖಲೆಗಳ ಜೊತೆ ಸಲ್ಲಿಸಬಹುದಾಗಿದೆ.
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ಬಾಡಿಗೆದಾರರಾಗಿದ್ದರೆ ಬಾಡಿಗೆ ಒಪ್ಪಂದದ ಪತ್ರ , ಪಾನ್ ಕಾರ್ಡ್ ಮತ್ತು ಭಾವಚಿತ್ರವೊಂದನ್ನು ನೀವು ಪರಿಶೀಲನೆ ವೇಳೆ ದಾಖಲೆಯಾಗಿ ನೀಡಬೇಕಾಗುತ್ತದೆ.
ಗೃಹ ಜ್ಯೋತಿ ಯೋಜನೆಯ ಮರುಪರಿಶೀಲನೆ ವೇಳೆ ನೀವು ಯಾವುದೇ ಪ್ರಮುಖ ದಾಖಲೆಯನ್ನು ನೀಡದಿದ್ದರೆ ಅಥವಾ ನಿರಾಕರಿಸಿದರೆ, ನಿಮ್ಮ ಉಚಿತ ವಿದ್ಯುತ್ ಸೌಲಭ್ಯವು ರದ್ದಾಗುವ ಅಥವಾ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ. ನೀವು ಆದಾಯ ತೆರಿಗೆ ಪಾವತಿದಾರರಲ್ಲದಿದ್ದರೆ ಅಥವಾ ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಸಿಬ್ಬಂದಿಗೆ ಆ ವಿಷಯವನ್ನು ತಿಳಿಸಿ ಆಪ್ನಲ್ಲಿ ನಮೂದಿಸಬಹುದು. ಪ್ಯಾನ್ ಕಾರ್ಡ್ ಇಲ್ಲದ ತಕ್ಷಣ ಸೌಲಭ್ಯ ಕಡಿತವಾಗುವುದಿಲ್ಲ.
ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಅಥವಾ ರಾಜ್ಯದ ಮತದಾರರಾಗಿರಬೇಕು. ಈ ಯೋಜನೆ ಕೇವಲ ಮನೆಗಳಲ್ಲಿ ವಿದ್ಯುತ್ ಬಳಕೆಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅಥವಾ ವ್ಯಾಪಾರ ಸಂಸ್ಥೆಗಳ ವಿದ್ಯುತ್ ಸಂಪರ್ಕಗಳಿಗೆ ಇದು ಅನ್ವಯಿಸುವುದಿಲ್ಲ.
ಹೌದು, ಸ್ವಂತ ಮನೆ ಇರುವವರು ಮಾತ್ರವಲ್ಲದೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳೂ ಸಹ ಈ ಯೋಜನೆಗೆ ಅರ್ಹರು. ಇದಕ್ಕಾಗಿ ಬಾಡಿಗೆ ಕರಾರು ಪತ್ರ ಅಥವಾ ಆ ವಿಳಾಸವಿರುವ ವೋಟರ್ ಐಡಿಯನ್ನು ನೀಡಬೇಕಾಗುತ್ತದೆ.
ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ವಿವರಗಳ ಪರಿಷ್ಕರಣೆ (ಮರು ನೋಂದಣಿ / ಮನೆ-ಮನೆ ಪರಿಶೀಲನೆ) ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸಿದೆ.