ನವದೆಹಲಿ, ಸೆ. 07 (DaijiworldNews/AK): ನಗರದ 5 ಅಂತಸ್ತಿನ ಕಟ್ಟಡ ಕುಸಿದು ಏಳು ಜನ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಪ್ರಕರಣ ಈಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಉನ್ನತ ತನಿಖೆಗೆ ಕೋರ್ಟ್ ಆದೇಶಿಸಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ದೆಹಲಿ ಸರ್ಕಾರ ಮತ್ತು ನಾಗರಿಕ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ದುರಂತದ ಬೆನ್ನಲ್ಲೇ ದೆಹಲಿಯಲ್ಲಿ ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಲು ಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠವು, ಅಪಘಾತದ ಜವಾಬ್ದಾರಿ ಕುಸಿದುಬಿದ್ದ ಕಟ್ಟಡದ ಪಿಜಿ ಮಾಲೀಕರದ್ದಷ್ಟೇ ಅಲ್ಲ; ಕಟ್ಟಡ ನಿರ್ಮಾಣ ಸುರಕ್ಷತೆಯನ್ನು ಪರಿಶೀಲಿಸಲು ಇರುವ ಎಲ್ಲ ಅಧಿಕಾರಿಗಳದ್ದೂ ಆಗಿದೆ. ಅಧಿಕಾರಿಗಳು ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಶ್ರದ್ಧೆ ವಹಿಸಿದ್ದರೆ, ಅಂತಹ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.
ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ದೇಶದ ಅನೇಕ ಕಡೆಗಳಿಂದ ದೆಹಲಿಗೆ ಬರುತ್ತಾರೆ. ಅವರೇ ದೇಶದ ಭವಿಷ್ಯ. ಹೀಗಿರುವಾಗ ಅವರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.