ನವದೆಹಲಿ, ಸೆ. 07 (DaijiworldNews/AK): ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ದೌರ್ಜನ್ಯ ಎಸಗುವ ಅಥವಾ ಹಲ್ಲೆ ನಡೆಸುವ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.

ಇಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ತಕ್ಷಣವೇ ವಶಕ್ಕೆ ಪಡೆಯಬೇಕು ಮತ್ತು ಅವರು ಸಮಾಜದಲ್ಲಿ ಮುಕ್ತವಾಗಿ ಓಡಾಡಲು ಬಿಡಬಾರದು ಎಂದು ಪೀಠವು ಆಕ್ರೋಶ ವ್ಯಕ್ತಪಡಿಸಿದೆ.
ಮಹಾರಾಷ್ಟ್ರದಲ್ಲಿ ವೈದ್ಯರ ಮೇಲೆ ರಾಜಕಾರಣಿಗಳು ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ಪಾಲಗಡ್ ಜಿಲ್ಲೆಯಲ್ಲಿ ದಹಿ ಹಂಡಿ ಉತ್ಸವದ ವೇಳೆ ಶಿವಸೇನಾ ಪಕ್ಷದ ಪುಡಾರಿಗಳು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ದೊಡ್ಡ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರ ಸುರಕ್ಷತೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ವೈದ್ಯಕೀಯ ಸಿಬ್ಬಂದಿಯ ರಕ್ಷಣೆ ಸರ್ಕಾರದ ಪ್ರಥಮ ಕರ್ತವ್ಯವಾಗಿದೆ ಎನ್ನುವ ಅಭಿಪ್ರಾಯವನ್ನು ಪುನರುಚ್ಚರಿಸಿದೆ.
ಜನಪ್ರತಿನಿಧಿಗಳು ಅಥವಾ ರಾಜಕಾರಣಿಗಳಾಗಿದ್ದರೂ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಆಸ್ಪತ್ರೆಗಳಿಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸುವುದು ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಇಂತಹ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾದ ತಕ್ಷಣವೇ ಆರೋಪಿಗಳನ್ನು ವಶಕ್ಕೆ ಪಡೆದು ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕು. ಅವರ ರಾಜಕೀಯ ಪ್ರಭಾವಕ್ಕೆ ಮಣಿದು ಪೊಲೀಸರು ಯಾವುದೇ ರಕ್ಷಣೆ ನೀಡಬಾರದು ಎಂದು ಕೋರ್ಟ್ ನಿರ್ದೇಶನ ನೀಡಿದೆ.