ಬೆಂಗಳೂರು, ಸೆ. 07 (DaijiworldNews/TA): ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ವಿರೋಧಿಸಿದ್ದಾರೆ. ಸೆಪ್ಟೆಂಬರ್ 4ರಂದು ಸಚಿವ ಸಂಪುಟವು ಜಮೀನು ಕಳೆದುಕೊಂಡವರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ನೈಸ್ ಸಂಸ್ಥೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೇವೇಗೌಡರು ಬಹಿರಂಗ ಪತ್ರ ಬರೆದಿದ್ದಾರೆ.

1997ರ ಚೌಕಟ್ಟು ಒಪ್ಪಂದವನ್ನು ಉಲ್ಲೇಖಿಸಿರುವ ದೇವೇಗೌಡರು, ರಸ್ತೆ ಹಾಗೂ ಮೂಲಸೌಕರ್ಯ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ ನಿವೇಶನಗಳನ್ನು ನಿರ್ಮಿಸಲು ಅವಕಾಶವಿಲ್ಲ ಎಂಬುದನ್ನು ಕಾಂಗ್ರೆಸ್ ಸರ್ಕಾರವೇ 2016ರಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಿಳಿಸಿತ್ತು ಎಂದು ಹೇಳಿದ್ದಾರೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳು ಸಹ ಇಂಟರ್ಚೇಂಜ್ ಜಾಗಗಳಲ್ಲಿ ನಿವೇಶನ ನಿರ್ಮಾಣ ಮಾಡುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವ ಸಂಪುಟವು ನಿವೇಶನ ಹಂಚಿಕೆಗೆ ಅನುಮತಿ ನೀಡಿರುವುದು ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿದೆ ಎಂದು ದೇವೇಗೌಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾದಾವರ, ಕೆಂಗೇರಿ, ಕೊಮ್ಮಘಟ್ಟ, ಸೋಂಪುರ ಹಾಗೂ ಪಂತರಪಾಳ್ಯ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳು ನೈಸ್ ರಸ್ತೆ ಹಾಗೂ ಮೂಲಸೌಕರ್ಯ ಯೋಜನೆಯ ವ್ಯಾಪ್ತಿಗೆ ಬರುತ್ತವೆ ಎಂದು ದೇವೇಗೌಡರು ಹೇಳಿದ್ದಾರೆ. ಜುಲೈ 2026ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಅವರು, ನೈಸ್ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ವೈಯಕ್ತಿಕ ಲಾಭ ಮಾಡಿಕೊಂಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದಾರೆ. ನೈಸ್ ಸಂಸ್ಥೆಯ ಖಾತೆಗಳ ಫೋರೆನ್ಸಿಕ್ ಆಡಿಟ್ಗೆ ನ್ಯಾಯಾಲಯ ಸೂಚಿಸಿರುವುದನ್ನೂ ದೇವೇಗೌಡರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಇದೇ ವಿಚಾರವಾಗಿ ಸರ್ಕಾರದ ನಿರ್ಧಾರದ ಉದ್ದೇಶವನ್ನು ಪ್ರಶ್ನಿಸಿರುವ ದೇವೇಗೌಡರು, “ನಿಜವಾದ ಫಲಾನುಭವಿಗಳು ಸಂತ್ರಸ್ತ ರೈತರೋ ಅಥವಾ ನೈಸ್ ಸಂಸ್ಥೆ ಮತ್ತು ಅದರ ಹೂಡಿಕೆದಾರರೋ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, “ನಿಮ್ಮ ಸಂಪುಟದಲ್ಲೂ ಹೂಡಿಕೆದಾರರಿದ್ದಾರೆಯೇ?” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ನೈಸ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರಗಳು ಹಾಗೂ ನ್ಯಾಯಾಲಯದ ಆದೇಶಗಳ ನಡುವಿನ ಹೊಂದಾಣಿಕೆ ಕುರಿತು ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.