ಚೆನ್ನೈ ಸೆ. 07 (DaijiworldNews/AA): ದೃಢ ಸಂಕಲ್ಪ ಮತ್ತು ಸಾಧಿಸುವ ಛಲವಿದ್ದರೆ ನಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು ಎಂಬುದ್ದಕ್ಕೆ 17 ವರ್ಷದ ಜೆ. ಸಂತೋಷ್ ಸಾಕ್ಷಿಯಾಗಿದ್ದಾರೆ. ಹುಟ್ಟಿನಿಂದಲೇ ಶೇಕಡಾ 90 ರಷ್ಟು ಬೆನ್ನುಮೂಳೆಯ ವಿಕಲಾಂಗತೆ ಮತ್ತು ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿರುವ ಅವರು ಈಗ ಪ್ರತಿಷ್ಠಿತ ಐಐಟಿ ಮದ್ರಾಸ್ನ 4 ವರ್ಷಗಳ 'ಡೇಟಾ ಸೈನ್ಸ್ ಮತ್ತು ಅಪ್ಲಿಕೇಶನ್ಸ್' ಕೋರ್ಸ್ಗೆ ಆಯ್ಕೆಯಾಗಿದ್ದಾರೆ.

ಬಡ ಕುಟುಂಬದವರಾದ ಸಂತೋಷ್ ಅವರ ತಂದೆ ಆಟೋ ಚಾಲಕರಾಗಿದ್ದಾರೆ. ಐಐಟಿ ಮದ್ರಾಸ್ನ ಅರ್ಹತಾ ಪರೀಕ್ಷೆಯನ್ನು ಎರಡನೇ ಪ್ರಯತ್ನದಲ್ಲಿ ಉತ್ತೀರ್ಣರಾದರು. ಈ ಮೂಲಕ ಐಐಟಿ ಮದ್ರಾಸ್ನಲ್ಲಿ ಸೀಟು ಗಳಿಸಿದರು. ಎನ್ಜಿಒ ಸಂಸ್ಥೆಯೊಂದರ ಮೂಲಕ ಸಂತೋಷ್ ಅವರಿಗೆ ಈ ವಿಶೇಷ ಕೋರ್ಸ್ನ ಬಗ್ಗೆ ಮಾಹಿತಿ ದೊರೆತಿತ್ತು. ತಮ್ಮ ದೈಹಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ತರಗತಿಗಳನ್ನು ಮನೆಯಿಂದಲೇ ಆನ್ಲೈನ್ ಮೂಲಕ ಪೂರ್ಣಗೊಳಿಸಿದರು.
ಸಂತೋಷ್ ಅವರಿಗೆ ಸಂಸ್ಥೆಯೊಂದು ಅವರ ಮೊದಲ ವರ್ಷದ ಸಂಪೂರ್ಣ ಬೋಧನಾ ವೆಚ್ಚವನ್ನು ಭರಿಸಲಿದ್ದು, ಆರಂಭಿಕ ಹಂತದಲ್ಲಿ ಅಗತ್ಯವಿರುವ ಎಲ್ಲಾ ನೆರವು ನೀಡಲಿದೆ. ಇದರ ಜೊತೆಗೆ, ಅವರಿಗೆ ಆಧುನಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತರಬೇತಿಯನ್ನು ಸಹ ಒದಗಿಸಲಾಗುತ್ತಿದೆ. ತಮ್ಮ ಬಿಎಸ್ ಪದವಿಯನ್ನು ಪೂರ್ಣಗೊಳಿಸಿ ಐಟಿ ಕ್ಷೇತ್ರದಲ್ಲಿ ಸ್ವಾವಲಂಬಿ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದು ಸಂತೋಷ್ ಅವರ ಗುರಿಯಾಗಿದೆ. ದೈಹಿಕ ನ್ಯೂನತೆಗಳು ಮತ್ತು ಆರ್ಥಿಕ ಕಷ್ಟಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಂತೋಷ್ ಅವರು ಸ್ಫೂರ್ತಿಯಾಗಿದ್ದಾರೆ.