ಬೆಂಗಳೂರು, ಸೆ. 05 (DaijiworldNews/AK): ಇಂದಿನ ಬದಲಾಗುತ್ತಿರುವ ಆಧುನಿಕತೆಯಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ರೂಪಾಂತರಗೊಂಡಿವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಇಂದು ಪ್ರತಿಯೊಂದು ಪ್ರಶ್ನೆಗೆ ಸೆಕೆಂಡುಗಳಲ್ಲಿ ಉತ್ತರ ನೀಡಬಲ್ಲದು. ಆದರೆ AI ಯ ಈ ಕಾಲದಲ್ಲಿ ಮಕ್ಕಳ ಬೆಳೆವಣಿಗೆಗೆ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಉತ್ತರಗಳನ್ನು ತಂತ್ರಜ್ಞಾನ ನೀಡಬಹುದಾದರೂ, ಯಾವ ಉತ್ತರವನ್ನು ನಂಬಬೇಕು, ಯಾವ ಪ್ರಶ್ನೆಯನ್ನು ಕೇಳಬೇಕು ಮತ್ತು ಜೀವನದ ಸರಿಯಾದ ಮಾರ್ಗ ಯಾವುದು ಎಂಬುದನ್ನು ತೀರ್ಮಾನಿಸಲು ಮಕ್ಕಳಿಗೆ ಇಂದಿಗೂ ‘ಗುರು’ವಿನ ಮಾರ್ಗದರ್ಶನ ಬೇಕು.

ತರಗತಿಗಳಲ್ಲಿ ಕೇವಲ ಕಪ್ಪು ಹಲಗೆಗಳು ಮಾತ್ರವಲ್ಲದೆ ಶಿಕ್ಷಕರ ಕರ್ತವ್ಯದ ಸ್ವರೂಪವೂ ಬದಲಾಗುತ್ತಿದೆ. ದೇಶಾದ್ಯಂತ ಶಿಕ್ಷಕರಿಗೆ AI ಉಪಕರಣಗಳ ತರಬೇತಿ ನೀಡಲಾಗುತ್ತಿದ್ದು, ಇದು ಅವರ ದೈನಂದಿನ ಕಾರ್ಯಗಳನ್ನು ಸರಳಗೊಳಿಸಿ, ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ಅವರನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತಿದೆ. CBSE ಸಂಸ್ಥೆಯು 2026-27ರ ಶೈಕ್ಷಣಿಕ ಸಾಲಿನಿಂದ ಕಂಪ್ಯೂಟೇಶನಲ್ ಥಿಂಕಿಂಗ್ ಮತ್ತು AI ಪಠ್ಯಕ್ರಮವನ್ನು ಪರಿಚಯಿಸಿದೆ. ಇದರ ಮೂಲ ಉದ್ದೇಶ ಶಿಕ್ಷಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸುವುದು ಇದರ ಉದ್ದೇಶ.
ಶಿಕ್ಷಣ ಎಂಬುದು ಕೇವಲ ದತ್ತಾಂಶ ಅಥವಾ ಮಾಹಿತಿಯ ಸಂಗ್ರಹವಲ್ಲ. UDISE ದತ್ತಾಂಶದ ಪ್ರಕಾರ, ಭಾರತದ ವಿಶಾಲ ಶಿಕ್ಷಣ ವ್ಯವಸ್ಥೆಯಲ್ಲಿ ಲಕ್ಷಾಂತರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿಗೆ ಕೊರತೆಯಿಲ್ಲವಾದರೂ, ಗೊಂದಲಗಳ ಮಹಾಪೂರವೇ ಇದೆ. ಇಂತಹ ಸಮಯದಲ್ಲಿ, ಮಗುವಿನ ಒಳಗಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ, ಸರಿ-ತಪ್ಪಿನ ನಿರ್ಧಾರ ತೆಗೆದುಕೊಳ್ಳಲು ಶಿಕ್ಷಕರು ಮಾರ್ಗದರ್ಶಕರಾಗಿ ಇರುತ್ತಾರೆ.
ಕಾಲಾನಂತರದಲ್ಲಿ ವಿಶಾಲ ತರಗತಿಗಳು ಹಾಗೂ ವೃತ್ತಿಪರತೆಯ ಕಾರಣದಿಂದ ಗುರು-ಶಿಷ್ಯ ಸಂಬಂಧದ ಸ್ವರೂಪ ಬದಲಾಗಿದೆ. ಆದರೆ ಮಗುವಿನ ಮನಸ್ಸನ್ನು ಅರ್ಥೈಸಿಕೊಳ್ಳುವ ಕಾರ್ಯವನ್ನು ತಂತ್ರಜ್ಞಾನ ಮಾಡಲು ಸಾಧ್ಯವಿಲ್ಲ. ಮಗು ಶಾಲೆಯಲ್ಲಿ ಕಳೆಯುವ ಸಮಯದಷ್ಟೇ ಸಮಯವನ್ನು ಮನೆಯಲ್ಲಿಯೂ ಕಳೆಯುವುದರಿಂದ, ಅವರ ಮಾನಸಿಕ ಹಾಗೂ ಭವಿಷ್ಯದ ವಿಕಾಸದಲ್ಲಿ ಶಿಕ್ಷಕರ ಜೊತೆಗೆ ಪೋಷಕರ ಪಾತ್ರವೂ ಬಹು ಮುಖ್ಯವಾಗಿದೆ.
ಒಟ್ಟಾರೆ ಹೇಳುವುದಾದರೆ AI ಯು ಶಿಕ್ಷಕನಿಗೆ ಉತ್ತಮ ಸಹಾಯಕ ಆಗಬಹುದೇ ಹೊರತು ಎಂದಿಗೂ ಗುರುವಿನ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ತಾಂತ್ರಿಕ ಯುಗದಲ್ಲಿಯೂ ಪ್ರೀತಿ ಮತ್ತು ಕಾಳಜಿ ತೋರುವ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಎಂದೆಂದಿಗೂ ಅಸಾಧಾರಣ ಮತ್ತು ಅವಿಸ್ಮರಣೀಯ ವ್ಯಕ್ತಿಯಾಗಿ ಉಳಿಯುತ್ತಾರೆ.