ಮುಂಬೈ, ಸೆ. 05 (DaijiworldNews/AA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸ್ಥಿರ ವ್ಯಾಪಾರ ನೀತಿಗಳು ಮತ್ತು ಏಕಪಕ್ಷೀಯ ಸುಂಕ ನಿರ್ಧಾರಗಳ ಕುರಿತು ಭಾರತ ಪ್ರವಾಸದಲ್ಲಿರುವ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್ ಅವರು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.

ಮುಂಬೈನಲ್ಲಿ ನಡೆದ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ (ಎಫ್ಟಿಎ) ಭಾರತ-ಬೆಲ್ಜಿಯಂ ಉನ್ನತ ಮಟ್ಟದ ಸಂವಾದದಲ್ಲಿ ಮಾತನಾಡಿದ ಡಿ ವೆವರ್, "ಇತ್ತೀಚಿನ ದಿನಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧಗಳನ್ನು ಹೇರಲು, ಮಾರುಕಟ್ಟೆಗಳನ್ನು ಮುಚ್ಚಲು ಮತ್ತು ಸುಂಕಗಳನ್ನು ವಿಧಿಸಲು ಹೆಚ್ಚು ಹೆಚ್ಚು ಧ್ವನಿಗಳು ಕೇಳಿಬರುತ್ತಿವೆ. ಕೆಲವರು ಇದನ್ನು ಸಂಪೂರ್ಣವಾಗಿ ಮನಸೋ ಇಚ್ಛೆ ಮಾಡುತ್ತಿದ್ದಾರೆ. ಅವರು ಸೋಮವಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ, ಬುಧವಾರ ಅದನ್ನು ಹಿಂಪಡೆಯುತ್ತಾರೆ ಮತ್ತು ಶನಿವಾರ ಮತ್ತೆ ಜಾರಿಗೆ ತರುತ್ತಾರೆ" ಎಂದು ತಿಳಿಸಿದರು.
"ಭಾರತ ಮತ್ತು ಯುರೋಪಿಯನ್ ಯೂನಿಯನ್ (ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಏಕಪಕ್ಷೀಯ ಹಾಗೂ ಅನಿಶ್ಚಿತ ಸುಂಕಗಳ ವಿರುದ್ಧ ರಚನಾತ್ಮಕ ರಕ್ಷಣಾ ಕವಚವಾಗಿ ಕೆಲಸ ಮಾಡಲಿದೆ. ಈ ಒಪ್ಪಂದವು ಅಡೆತಡೆಗಳು ಮತ್ತು ಒತ್ತಡಗಳ ವಿರುದ್ಧ ಎರಡೂ ಆರ್ಥಿಕತೆಗಳನ್ನು ಸದೃಢಗೊಳಿಸಿದೆ" ಎಂದರು.
"ಬೆಲ್ಜಿಯಂನಂತಹ ಮುಕ್ತ, ಮಧ್ಯಮ ಗಾತ್ರದ ವ್ಯಾಪಾರ ಆರ್ಥಿಕತೆಗಳು ಮತ್ತು ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ಶಕ್ತಿಶಾಲಿ ದೇಶಗಳು ಆರ್ಥಿಕ ಪ್ರತ್ಯೇಕತೆ ಅಥವಾ ಅಸ್ತ್ರವಾಗಿ ಬಳಸಲಾಗುವ ವ್ಯಾಪಾರ ನಿರ್ಬಂಧಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದರು.