ಕಾರಟಗಿ (ಕೊಪ್ಪಳ ಜಿಲ್ಲೆ), ಸೆ. 05 (DaijiworldNews/AK): ಕುಂಭಕರ್ಣನ ನಿದ್ದೆಯಲ್ಲಿರುವ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಬಿಜೆಪಿ ಬಡಿದೆಬ್ಬಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.

5ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ ಕಾರಟಗಿಯ ಎಪಿಎಂಸಿ ಯಾರ್ಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ನೆಪವೊಡ್ಡಿ ಗಾಳಿಯಲ್ಲಿ ಗೋಪುರ ಕಟ್ಟುತ್ತಿದೆ. ಇದು ಬಿಟ್ಟರೆ ಬೇರೇನೂ ಕೆಲಸವನ್ನೂ ಈ ಸರ್ಕಾರ ಮಾಡುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿಗಳ ಬಗ್ಗೆ ಭಾರಿ ಪ್ರಚಾರ ಮಾಡಿದರು. ಇದು ಜನಪ್ರಿಯ ಸರ್ಕಾರ ಅಲ್ಲ ಜಾಹೀರಾತು ಸರ್ಕಾರ ಎಂದು ಹೇಳಿದ್ದೆ ಎಂದು ವ್ಯಂಗ್ಯವಾಡಿದರು.
ಮತ್ತೆ ಸರ್ಕಾರದ ಭ್ರಮೆಯಲ್ಲಿ ಕಾಂಗ್ರೆಸ್
ಮುಂದಿನ ಬಾರಿ ತಮ್ಮದೇ ಸರ್ಕಾರ ಬರುತ್ತೆ ಎಂದು ಕಾಂಗ್ರೆಸ್ ಭ್ರಮೆಯಲ್ಲಿದೆ. ಎಲ್ಲ ವರ್ಗದ ಜನರಿಗೆ ಈ ಸರ್ಕಾರ ಅನ್ಯಾಯ ಮಾಡಿದೆ. ಆಡಳಿತ ಪಕ್ಷದ ಶಾಸಕರೇ ತಮ್ಮ ಸರ್ಕಾರ ಟೇಕಾಪ್ ಆಗಿಲ್ಲ ಅಂತಿದ್ದಾರೆ. ಇನ್ನಾದರೂ ಈ ಸರ್ಕಾರ ಎಚ್ಚೆತ್ತು ಬಡವರ, ರೈತರ ಬಗ್ಗೆ ಕಾಳಜಿಯನ್ನು ಸರ್ಕಾರ ತೋರಿಸಲಿ ಎಂದರು.
ಗೃಹಲಕ್ಷ್ಮಿ ಗ್ಯಾರಂಟಿ ಹಗರಣ
ಗೃಹಲಕ್ಷ್ಮಿ ಯೋಜನೆಯಲ್ಲಿ ಐದು ಸಾವಿರ ಕೋಟಿ ಹಗರಣದ ಬಗ್ಗೆ ಇಂದಿಗೂ ಸಿಎಂ ಆಗಲಿ, ಸಚಿವರಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಮಹಾಲೇಖಪಾಲರ ವರದಿಯಲ್ಲೂ ಇದರ ಬಗ್ಗೆ ಉಲ್ಲೇಖವಾಗಿದೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಮಾಡಿ. ಅದಕ್ಕೆ ಅಧ್ಯಕ್ಷರನ್ನು ನೇಮಿಸಿ ಸಂಪುಟ ದರ್ಜೆ ನೀಡಿ ಜನರ ತೆರಿಗೆ ಹಣದಿಂದ ಖರ್ಚು ಮಾಡುತ್ತಿದ್ದೀರಿ. ಇಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆದರೂ ಈ ಸಮಿತಿ ಅಧ್ಯಕ್ಷರು ಏನು ಕತ್ತೆ ಕಾಯುತ್ತಿದ್ದರೆ ಎಂದು ಪ್ರಶ್ನಿಸಿದರು.
ಸೈಕಲ್ ಇಲ್ಲ. ಬಸ್ ಸಹ ಇಲ್ಲ
ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ತಲುಪಿಲ್ಲವೆಂದರೆ ಇದಕ್ಕೆ ಯಾರು ಹೊಣೆ. ಇನ್ನು ಶಕ್ತಿ ಯೋಜನೆಗೆ ಭಾರಿ ಪ್ರಚಾರ ನೀಡುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿ ಬಸ್ ಗಳೇ ಇಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಇದ್ದಾಗ ಮಕ್ಕಳಿಗೆ ಸೈಕಲ್ ನೀಡಿದ್ದರು. ಅದಕ್ಕೂ ಕಾಂಗ್ರೆಸ್ ಕನ್ನ ಹಾಕಿದೆ. ಕೆಂಪು ಬಸ್ಗಳಲ್ಲಿ ಪ್ರಯಾಣಿಕರೇ ಇಲ್ಲ. ಇದರಿಂದ ನಷ್ಟವಾಗುತ್ತಿದೆ ಎಂದರು.
ವೈದ್ಯರಿಲ್ಲ.. ಶಿಕ್ಷಕರಿಲ್ಲ. ಕೊರತಯೇ ಎಲ್ಲ...
ದುಡಿಯುವ ಕೈಗಳಿಗೆ ಶಕ್ತಿ ನೀಡಿಲ್ಲ. ದೊಡ್ಡ ದೊಡ್ಡ ಉದ್ದಿಮೆಗಳನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪನೆ ಮಾಡುವುದು ಹೋಗಲಿ. ಸಾಕಷ್ಟು ಶಿಕ್ಷಕರನ್ನು ನೇಮಕ ಮಾಡಲಿಲ್ಲ. ಈ ಭಾಗದಲ್ಲಿ ಶಾಲೆ ಇದ್ದರೆ ಶಿಕ್ಷಕರಿಲ್ಲ, ಆಸ್ಪತ್ರೆ ಇದ್ದರೆ ವೈದ್ಯರಿರೊದಿಲ್ಲ ಎಂದರು
ಬಿಪಿಎಲ್ ಕಾರ್ಡ್ ರದ್ದು
ಅನ್ನಭಾಗ್ಯ ಯೋಜನೆಯದ್ದು ಮತ್ತೊಂದು ಕಥೆ. ನರೇಂದ್ರ ಮೋದಿ ಅವರು ಪ್ರತಿ ಕುಟುಂಬಕ್ಕೆ ಹತ್ತು ಕೆಜಿ ನೀಡ್ತ ಇದ್ದರು. ಕಾಂಗ್ರೆಸ್ ಸರ್ಕಾರ ಹತ್ತು ಕೆಜಿ ಅಕ್ಕಿ ಕೊಡ್ತೇವೆ ಅಂದ್ರು. ಅದನ್ನೂ ಸರಿಯಾಗಿ ನೀಡಲಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಲಕ್ಷಾಂತರ ಬಡವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿದ್ದೀರಿ ಎಂದು ದೂರಿದರು.