ತಿರುವನಂತಪುರಂ, ಸೆ. 05 (DaijiworldNews/AA): ನಿಲ್ಲಿಸಿದ್ದ ಗೂಡ್ಸ್ ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೇರಳದ ತ್ರಿಶ್ಯೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಮೃತರ ಪೈಕಿ ಐವರನ್ನು ತಮಿಳುನಾಡಿನ ಸೇಲಂ ಮೂಲದ ವಿಶ್ವ (20), ದಿಂಡಿಗಲ್ ಮೂಲದ ಸೂರ್ಯ (20), ಯುವಸಂಜಿತ್ (20) ಹಾಗೂ ಮಧುರೈ ಮೂಲದ ಸಂತೋಷ್ (20) ಮತ್ತು ಪ್ರಸನ್ನ ಎಂದು ಗುರುತಿಸಲಾಗಿದೆ. ಉಳಿದ ಮೂವರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ. ಮೃತರೆಲ್ಲರೂ ತಮಿಳುನಾಡಿನ ದಿಂಡಿಗಲ್ನಲ್ಲಿರುವ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೈಪಮಂಗಲಂ ಸಮೀಪದ ಪನಂಬಿಕ್ಕುನ್ನು ಸೆಂಟರ್ನ ರಸ್ತೆ ತಿರುವಿನಲ್ಲಿ ಲಾರಿಯನ್ನು ನಿಲ್ಲಿಸಲಾಗಿತ್ತು. ಮಧ್ಯರಾತ್ರಿ 11:40ರ ಸುಮಾರಿಗೆ ಬಂದ ತಮಿಳುನಾಡು ನೋಂದಣಿಯ ಕಾರು ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ರಕ್ಷಣಾ ಸಿಬ್ಬಂದಿ ಕಾರಿನ ಬಿಡಿಭಾಗಗಳನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನಲ್ಲಿದ್ದ ಎಂಟೂ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.