ಕಾರಟಗಿ (ಕೊಪ್ಪಳ ಜಿಲ್ಲೆ), ಸೆ. 04 (DaijiworldNews/AK): ರಾಜ್ಯದಲ್ಲಿ ಭೀಕರ ಬರದಿಂದಾಗಿ ಅನ್ನದಾತರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಜಮೀನುಗಳಿಗೆ ಬಂದು ಬರ ಪರಿಸ್ಥಿತಿ ವೀಕ್ಷಣೆ ಮಾಡಬೇಕಾದ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ನಲ್ಲಿ ಕುಳಿತು ಬರವೀಕ್ಷಣೆ ಮಾಡುತ್ತಿದ್ದಾರೆ. ಹೆಲಿಕಾಪ್ಟರ್ನಲ್ಲಿ ಬರ ಪರಿಶೀಲಿಸಿದ ದೇಶದ ಏಕೈಕ ಪುಣ್ಮಾತ್ಮ ಡಿ.ಕೆ.ಶಿವಕುಮಾರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬರ ವೀಕ್ಷಣೆಗೆ ಜಮೀನಿಗೆ ಹೋದರೆ ರೈತರು ಎಲ್ಲಿ ತಮ್ಮ ಗ್ರಹಚಾರ ಬಿಡಿಸುತ್ತಾರೋ ಎಂಬ ಭಯದಲ್ಲಿ ಸಿಎಂ ಹೆಲಿಕಾಪ್ಟರ್ ಏರಿದ್ದಾರೆ. ಇಂತಹ ಸಿಎಂ ನೋಡುವ ದೌರ್ಭಾಗ್ಯ ನಮ್ಮದಾಗಿದೆ. ಹೆಲಿಕಾಪ್ಟರ್ನಲ್ಲಿ ಕುಳಿತು ನೋಡಿದರೆ ಭತ್ತ ಯಾವುದು, ರಾಗಿ ಯಾವುದು ಎಂದು ಹೇಗೆ ತಿಳಿಯಲಿದೆ ಎಂದು ಪ್ರಶ್ನಿಸಿದರು.
3600 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ
ಭ್ರಷ್ಟ, ಜನವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಭೀಕರ ಬರದಿಂದಾಗಿ ರೈತರು ಎದೆಗುಂದಿದ್ದಾರೆ. ಕಳೆದ ಮೂರು ವರ್ಷದಲ್ಲಿ 3600 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ 950 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಡಿಗೆ ಅನ್ನ ನೀಡುವ ರೈತರ ಸಂಕಷ್ಟಕ್ಕೆ ಈ ಕಾಂಗ್ರೆಸ್ ಸರ್ಕಾರ ಸ್ಪಂದನೆ ಮಾಡಲೇ ಇಲ್ಲ. ಇದರಿಂದ ನಾಡಿನ ರೈತ ಹತಾಶರಾಗಿದ್ದಾರೆ ಎಂದು ತಿಳಿಸಿದರು.