ನವದೆಹಲಿ, ಸೆ. 04 (DaijiworldNews/AK): ಫುಕೆಟ್ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನ ಆಕಾಶದಲ್ಲೇ ಪಲ್ಟಿಯಾಗಿ 300 ಅಡಿ ಕೆಳಗೆ ಜಾರಿತ್ತು. ಇದರಿಂದ ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ವೈದ್ಯಕೀಯ ತಪಾಸಣೆಯಲ್ಲಿ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಆ ಸಮಯದಲ್ಲಿ ಏರ್ ಇಂಡಿಯಾ ತಕ್ಷಣ ಪ್ರತಿಕ್ರಿಯಿಸಲು ನಿರಾಕರಿಸಿದರೂ, ನಾಗರಿಕ ವಿಮಾನಯಾನ ನಿಯಮಾವಳಿಗಳಿಗೆ ಅನುಗುಣವಾಗಿ ತಾನು ಸಿಬ್ಬಂದಿಯ ಮಾದಕದ್ರವ್ಯ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸುತ್ತಿರುವುದಾಗಿ ಮತ್ತು ಅಧಿಕಾರಿಗಳೊಂದಿಗೆ ಸಹಕರಿಸುತ್ತಿರುವುದಾಗಿ ಸ್ಪಷ್ಟಪಡಿಸಿತ್ತು. ಇದೀಗ ಆ ಪೈಲಟ್ನನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
ಆಗಸ್ಟ್ 4ರಂದು ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ‘ಏರ್ಬಸ್ ಎ320 ವಿಮಾನವು ಆಕಾಶದಲ್ಲಿದ್ದಾಗಲೇ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಏರ್ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ ನಡೆಸಿದ ಪ್ರಾಥಮಿಕ ತನಿಖಾ ವರದಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. 137 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಇದ್ದ ವಿಮಾನವು ಹಾರಾಟ ನಡೆಸುತ್ತಿದ್ದಾಗ ಹಠಾತ್ತಾಗಿ ಸುಮಾರು 300 ಅಡಿ ಕೆಳಕ್ಕೆ ಜಾರಿತ್ತು. ನಂತರ ವಿಮಾನವನ್ನು ನಿಯಂತ್ರಣಕ್ಕೆ ತಂದು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಸಲಾಯಿತಾದರೂ, ವಿಮಾನದಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಸಿಬ್ಬಂದಿಯೊಬ್ಬರು ಬೆನ್ನುಮೂಳೆ ಮತ್ತು ಕುತ್ತಿಗೆಯ ಗಂಭೀರ ಗಾಯಕ್ಕೂ ಒಳಗಾಗಿದ್ದರು. ಈ ಘಟನೆಯ ನಂತರ ನಾಗರಿಕ ವಿಮಾನಯಾನ ಸಚಿವಾಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು.
ಈ ಘಟನೆಯ ನಂತರ ತನಿಖೆಯ ಭಾಗವಾಗಿ ವಿಮಾನದಲ್ಲಿದ್ದ ಪೈಲಟ್ಗಳನ್ನು ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸಲಾಯಿತು. ಸಹ-ಪೈಲಟ್ ಅವರ ವರದಿ ನೆಗೆಟಿವ್ ಬಂದಿದ್ದರೆ, ಮುಖ್ಯ ಪೈಲಟ್ ಅವರ ಆರಂಭಿಕ ಡ್ರಗ್ಸ್ ಪರೀಕ್ಷೆಯ ನಂತರ ನಡೆಸಲಾದ ರಕ್ತ ಪರೀಕ್ಷೆಯಲ್ಲಿ ಸೈಕೋಆಕ್ಟಿವ್ ವಸ್ತು ಬಳಕೆ ದೃಢಪಟ್ಟಿತ್ತು. ಇದರಿಂದಾಗಿ ಏರ್ ಇಂಡಿಯಾ ಆ ಪೈಲಟ್ನನ್ನು ವಜಾಗೊಳಿಸಿದೆ.